ಚಿಕ್ಕಮಂಗಳೂರು : ಹಾಂದಿ ಗ್ರಾಮದಲ್ಲಿ ಹೆಲ್ಸ್‌ಲೈನ್ ಸೇವಾ ತಂಡದ ವತಿಯಿಂದ ವೃದ್ಧ ದಂಪತಿಗಳಾದ ರಾಜು ಮತ್ತು ಸೀತಮ್ಮ ಅವರಿಗೆ ದುರಸ್ತಿ ಮಾಡಲಾದ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಪ್ಪ, ‘ಜನಪರ ಕಾರ್ಯಗಳನ್ನು ಜನಪ್ರತಿನಿಧಿಗಳು ಅಥವಾ ಸಮಾಜ ಸುಧಾರಕರು ಮಾತ್ರವಲ್ಲದೆ, ಸಮಾನ ಮನಸ್ಕರೂ ಕೈಗೊಳ್ಳಬಹುದು ಎಂಬುದಕ್ಕೆ ಈ ಕಾರ್ಯವೇ ಉತ್ತಮ ಉದಾಹರಣೆ ಎಂದು ಹೇಳಿದರು.
ತೀವ್ರವಾಗಿ ಹಾನಿಗೊಂಡಿದ್ದ ಮನೆಯನ್ನು ದುರಸ್ತಿ ಮಾಡಿ ವೃದ್ಧ ದಂಪತಿಗೆ ಹಸ್ತಾಂತರಿಸಿರುವುದು ಶ್ಲಾಘನೀಯ. ಇದೇ ಸೇವಾ ತಂಡವು ಕಳೆದ ವರ್ಷ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಪರಿಕರಗಳ ನ್ನುವಿತರಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುರೇಶ್, ಬಡಾವಣೆ, ವಾರ್ಷಿಕ ವರದಿ ಮಂಡಿಸಿ, ಹೆಲ್ಸ್‌ಲೈನ್ ಸೇವಾ ತಂಡದಿಂದ ಕೈಗೊಳ್ಳಲಾದ ವಿವಿಧ ಸಾಮಾಜಿಕ ಚಟುವಟಿಕೆಗಳು ಹಾಗೂ ರಕ್ತದಾನ ಸೇವೆಗಳ ಕುರಿತು ಮಾಹಿತಿ ನೀಡಿದರು. ವೃದ್ಧ ದಂಪತಿಗಳ ಮನೆ ದುರಸ್ತಿಯನ್ನು ₹40 ಸಾವಿರ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಹೆಲ್ಸ್ ಲೈನ್ ಸೇವಾ ತಂಡದ ಸಂಸ್ಥಾಪಕ ಮಹೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಮನೆ ದುರಸ್ತಿಗೆ ಸಹಕಾರ ನೀಡಿದ ಸೇವಾ ತಂಡದ ಸದಸ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ಜಯಂತ್, ಕೃಷ್ಣ, ಕುಳಾಯಿ, ಗ್ರಾಮದ ಮುಖಂಡ ಎಂ. ಬಾಬು, ಮಗ್ಗಲಮಕ್ಕಿ ಗಣೇಶ್, ಆಟೊ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಂಜೀವ, ಸುರೇಶ್ ಹೊಸಪೇಟೆ, ಶಿವಾನಂದ, ಟೈಲರ್ ಸುರೇಶ್ ಉಪಸ್ಥಿತರಿದ್ದರು.

