ಟಿಪ್ಪರ್ ಲಾರಿಯ ಚಕ್ರದಡಿಗೆ ಸಿಲುಕಿ ಚಾಲಕ ಮೃತ..!

0
117

ವಿಟ್ಲ : ತಾಂತ್ರಿಕ ದೋಷ ಸರಿಪಡಿಸುವ ವೇಳೆ ತನ್ನಿಂತಾನೆ ಹಿಂದಕ್ಕೆ ಚಲಿಸಿದ ಟಿಪ್ಪರ್ ಲಾರಿಯ ಚಕ್ರದಡಿಗೆ ಸಿಲುಕಿ ಚಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವುಗುಡ್ಡೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವುಗುಡ್ಡೆ ಪ್ರದೇಶದಿಂದ ಹೊರರಾಜ್ಯಗಳಿಗೆ ಮಣ್ಣು ಸಾಗಾಟ ನಡೆಯುತ್ತಿದ್ದು, ಅಲ್ಲಿನ ವೇಸ್ಟ್ ಮಣ್ಣನ್ನು ತೆರವುಗೊಳಿಸುವ ಕಾರ್ಯಕ್ಕಾಗಿ ಮಹೇಶ್ ಅವರು ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದಿದ್ದರು.

ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನವನ್ನು ನಿಲ್ಲಿಸಿ ಅದರ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೇ ವೇಳೆ ಏಕಾಏಕಿ ಲಾರಿ ಹಿಂದಕ್ಕೆ ಚಲಿಸಿದ್ದು, ಮಹೇಶ್ ಅವರು ಮುಂದಿನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here