ಹಾವಂಜೆ ರಿಸರ್ವ್ ಫಾರೆಸ್ಟ್ ಅಂಚಿನಲ್ಲಿ ಭೂಕುಸಿತ ಭೀತಿ ; ತಡೆಗೋಡೆ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ..!

0
30

ಉಡುಪಿ : ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಿಸರ್ವ್ ಫಾರೆಸ್ಟ್ ಪ್ರದೇಶದ ಅಂಚಿನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಅಗೆದ ಪರಿಣಾಮ ಭೂಕುಸಿತದ ಆತಂಕ ಎದುರಾಗಿದ್ದು, ಅರಣ್ಯ ಇಲಾಖೆಯ ಜಾಗ ರಕ್ಷಣೆಗಾಗಿ ತಕ್ಷಣ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾಹಿತಿಯ ಪ್ರಕಾರ, ರಿಸರ್ವ್ ಫಾರೆಸ್ಟ್ ವ್ಯಾಪ್ತಿಯ ಸುಮಾರು 100 ಎಕರೆ ಪ್ರದೇಶಕ್ಕೆ ಹೊಂದಿಕೊಂಡಿರುವ ಖಾಸಗಿ ಜಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಅಗೆತ ನಡೆಸಲಾಗಿದೆ. ಕೆಲವು ಕಡೆಗಳಲ್ಲಿ ಸುಮಾರು 100 ಅಡಿ ಆಳದವರೆಗೆ ಮಣ್ಣು ತೆಗೆದಿರುವುದರಿಂದ ಗುಡ್ಡ ಪ್ರದೇಶಗಳು ದುರ್ಬಲಗೊಂಡಿದ್ದು, ಅರಣ್ಯ ಪ್ರದೇಶಕ್ಕೆ ಅಪಾಯ ಉಂಟಾಗಿದೆ ಎನ್ನಲಾಗಿದೆ.

ಅರಣ್ಯ ಪ್ರದೇಶದ ಎರಡೂ ಬದಿಗಳಲ್ಲಿರುವ ಖಾಸಗಿ ಜಾಗಗಳಿಂದ ನಿರಂತರವಾಗಿ ಮಣ್ಣು ಸಾಗಾಟ ನಡೆದಿರುವ ಪರಿಣಾಮ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲವು ಭಾಗಗಳಲ್ಲಿ ಮಣ್ಣು ಕುಸಿತದ ಲಕ್ಷಣಗಳು ಕಂಡುಬಂದಿದ್ದು, ಅರಣ್ಯ ಸಂಪತ್ತು ಹಾಗೂ ಪರಿಸರಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ.

ಈ ಭಾಗದಲ್ಲಿ ಅಕ್ರಮ ಮಣ್ಣು ಅಗೆತ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅರಣ್ಯ ಪ್ರದೇಶದ ಸಮೀಪ ನಡೆಯುತ್ತಿರುವ ಮಣ್ಣು ಅಗೆತವನ್ನು ತಕ್ಷಣ ನಿಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಣ್ಣು ಕುಸಿದಿರುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರವಾಗಿ ಬಲಿಷ್ಠ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಅರಣ್ಯ ಪ್ರದೇಶವನ್ನು ರಕ್ಷಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here