ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮೂಲತಃ ಪದವು ಗ್ರಾಮದ ಮುಗೋಡಿ ನಿವಾಸಿಯಾಗಿದ್ದು ಪ್ರಸ್ತುತ ಮೂಡುಶೆಡ್ಡೆಯ ಶಿವನಗರದಲ್ಲಿ ವಾಸವಾಗಿರುವ ಆಕಾಶ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ, ಜೋಕಟ್ಟೆ ರೈಲು ಹಳಿಯ ಸಮೀಪ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಡಿ ಜೋಕಟ್ಟೆ ನಿವಾಸಿ ಮುಹಮ್ಮದ್ ಸಾದಿಕ್ (37) ಎಂಬಾತನನ್ನು ಪಣಂಬೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಣಾಜೆ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಅಸೈಗೋಳಿ ಮೈದಾನದ ಬಳಿ ಮಾದಕ ವಸ್ತು ಸೇವನೆಯ ನಶೆಯಲ್ಲಿದ್ದ ಸುಮಂತ್ ಶೆಟ್ಟಿ (27), ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ವಿಕ್ರಮ್ (23) ಹಾಗೂ ಕುರ್ನಾಡು ಗ್ರಾಮದ ಮುಡಿಪು ಮೈದಾನದ ಬಳಿ ಕೆ.ಎಂ. ಬಿಲಾಲ್ (30) ಎಂಬವರನ್ನು ಬಂಧಿಸಲಾಗಿದೆ.
ಬಂಧಿತರೆಲ್ಲರ ವಿರುದ್ಧ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ವಿರುದ್ಧ ನಗರ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ಮುಂದುವರಿಸಿದೆ.

