ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಅವರು ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹಾಸ್ಯ, ಖಳನಾಯಕ ಹಾಗೂ ಗಂಭೀರ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಇದೀಗ ‘ದೇವಿ ಮಹಾತ್ಮೆ’ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ರೋಚಕ ಟೀಸರ್ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಶಾಖಾಹಾರಿ’ ಚಿತ್ರದ ಬಳಿಕ ಮತ್ತೊಮ್ಮೆ ಸಸ್ಪೆನ್ಸ್ ಮತ್ತು ರೋಮಾಂಚನಕಾರಿ ಕಥೆಯೊಂದಿಗೆ ರಂಗಾಯಣ ರಘು ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ನಾಗರಾಜ್ ಸೋಮಯಾಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಒಂದು ರಹಸ್ಯಮಯ ಹಾಗೂ ಥ್ರಿಲ್ಲರ್ ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಕೇವಲ 1 ನಿಮಿಷ 5 ಸೆಕೆಂಡ್‌ಗಳ ಟೀಸರ್‌ನಲ್ಲಿ ಸಮುದ್ರ ತೀರದ ದೃಶ್ಯಗಳು, ಹುಲಿವೇಷದ ಸಾಂಸ್ಕೃತಿಕ ವೈಭವ ಹಾಗೂ ರಂಗಾಯಣ ರಘು ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರದ ಹಿನ್ನೆಲೆ ಸಂಗೀತವನ್ನು ಲಿಕಿತ್ ಪ್ರಸಾದ್ ಕೆ. ಶೆಟ್ಟಿ ನೀಡಿದ್ದು, ಟೀಸರ್‌ಗೆ ಮತ್ತಷ್ಟು ಥ್ರಿಲ್ಲಿಂಗ್ ಅನುಭವ ನೀಡಿದೆ. ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ.ಡಿ. ಸತೀಶ್ ಚಂದ್ರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ್ ಹಾಗೂ ಮಹಾದೇವ ಹಡಪದ್ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ.
ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಅರವಿಂದ್ ಕುಪ್ಳಿಕರ್, ಭಾಸ್ಕರ್ ಬಂಗೇರ, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಬರವಣಿಗೆಯಲ್ಲಿ ಸಹಕರಿಸಿದ್ದಾರೆ.
ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಮತ್ತು ಗಾಂಧಿರಾಜನ್ ಚಿತ್ರವನ್ನು ನಿರ್ಮಿಸಿದ್ದು, ಎಸ್.ಕೆ. ರಾವ್ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಚಿತ್ರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯ ಬಿಡುಗಡೆಯಾಗಿರುವ ಟೀಸರ್ ಚಿತ್ರಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ‘ದೇವಿ ಮಹಾತ್ಮೆ’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

