ಬೆಂಗಳೂರು : ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಎಐ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಗಲಕೋಟೆಯ ರವಿಕುಮಾರ್ (24), ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ರಂಜಿತ್ ಕುಮಾರ್ (25) ಹಾಗೂ ತೀರ್ಥಹಳ್ಳಿ ಮೂಲದ ಚಂದ್ರಕಾಂತ್ (33) ಎಂದು ಗುರುತಿಸಲಾಗಿದೆ. ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಪ್ರಕರಣದ ಮೊದಲ ಆರೋಪಿ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಪದವೀಧರನಾಗಿದ್ದು, ತನ್ನದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಹೆಚ್ಚು ವೀಕ್ಷಣೆ ಮತ್ತು ಆದಾಯ ಗಳಿಸುವ ಉದ್ದೇಶದಿಂದ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಅಪ್ಲೋಡ್ ಮಾಡುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನೊಬ್ಬ ಆರೋಪಿ ರಂಜಿತ್ ಕುಮಾರ್ ವಾರ್ಷಿಕ ಸುಮಾರು 20 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ. ತಂತ್ರಜ್ಞಾನದ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಕೇವಲ ಮನರಂಜನೆಗಾಗಿ ವಿವಿಧ ನಟಿಯರ ಎಐ ಡೀಪ್‌ಫೇಕ್ ವಿಡಿಯೋಗಳನ್ನು ತಯಾರಿಸುತ್ತಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಮೂರನೇ ಆರೋಪಿ ಚಂದ್ರಕಾಂತ್ ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದ. ಕೇವಲ ವಿಕೃತ ಸಂತೋಷಕ್ಕಾಗಿ ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮಾಡುತ್ತಿದ್ದಾಗಿ ಆತನು ಸಹ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಹೈಎಂಡ್ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಐ ಆಧಾರಿತ ಅಪ್ಲಿಕೇಶನ್ ಹಾಗೂ ಸಾಫ್ಟ್‌ವೇರ್ ಬಳಸಿ ನಟಿಯರ ಮುಖಗಳನ್ನು ಅಶ್ಲೀಲ ವಿಡಿಯೋಗಳಿಗೆ ಜೋಡಿಸಿ ಹರಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಸುಶಿಕ್ಷಿತರು ಹಾಗೂ ಉತ್ತಮ ಉದ್ಯೋಗದಲ್ಲಿದ್ದವರೇ ಇಂತಹ ಸೈಬರ್ ಅಪರಾಧಗಳಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

