ಬೆಳಗಾವಿ : ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಡಾಲ್ಮಿಯಾ ಭಾರತ್ ಫೌಂಡೇಶನ್ (DBF) ವತಿಯಿಂದ ಯಾದವಾಡ ಗ್ರಾಮದಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ಉಚಿತ ಔಷಧಿಗಳ ಸೌಲಭ್ಯ ಪಡೆದುಕೊಂಡರು.
ಡಾಲ್ಮಿಯಾ ಭಾರತ್ ಲಿಮಿಟೆಡ್‌ನ ಸಿಎಸ್‌ಆರ್ ಘಟಕವಾದ ಡಾಲ್ಮಿಯಾ ಭಾರತ್ ಫೌಂಡೇಶನ್, ಘಟಪ್ರಭಾದ ಜೆ.ಜಿ. ಕಂಪನಿ ಆಸ್ಪತ್ರೆ ಹಾಗೂ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಈ ಆರೋಗ್ಯ ಶಿಬಿರವನ್ನು ನಡೆಸಿತು.
ಯಾದವಾಡ ಹಾಗೂ ಸುತ್ತಮುತ್ತಲಿನ ಕಮನಕಟ್ಟಿ, ಕೊಪ್ಪದಟ್ಟಿ, ಗುಲಗಂಜಿ ಕೊಪ್ಪ ಮತ್ತು ಗಿರಿಸಗರ್ ಗ್ರಾಮಗಳ ನಿವಾಸಿಗಳು ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಜೆ.ಜಿ. ಕಂಪನಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಸಲಹೆ ನೀಡಿದರು. ಅಗತ್ಯವಿದ್ದವರಿಗೆ ವೈದ್ಯರ ಸಲಹೆಯಂತೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾಲ್ಮಿಯಾ ಭಾರತ್ ಬೆಳಗಾವಿ ಘಟಕದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶರದ್ ಹುರಕಟ್ ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿದ ಬೆಳಗಾವಿ ಘಟಕದ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್, “ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಸಮುದಾಯದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಡಾಲ್ಮಿಯಾ ಭಾರತ್ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ” ಎಂದು ಹೇಳಿದರು.
ಡಾಲ್ಮಿಯಾ ಭಾರತ್ ಫೌಂಡೇಶನ್ ಆರೋಗ್ಯ, ಶಿಕ್ಷಣ, ಜೀವನೋಪಾಯ ವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ನಿರಂತರವಾಗಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸಮುದಾಯದ ಜೀವನಮಟ್ಟ ಸುಧಾರಣೆಗೆ ಪರಿಣಾಮಕಾರಿ ಕೊಡುಗೆ ನೀಡುತ್ತಿದೆ.

