ಬೆಳಗಿನ ಉಪಹಾರದಲ್ಲಿ ಇಡ್ಲಿ, ದೋಸೆ, ವಡೆ ಅಥವಾ ಪೂರಿಗೆ ಜೊತೆಯಾಗಿ ನೀಡುವ ತೆಂಗಿನಕಾಯಿ ಚಟ್ನಿ ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ತಿನಿಸಾಗಿದೆ. ವಿಶೇಷವಾಗಿ ಹೋಟೆಲ್‌ಗಳಲ್ಲಿ ಸಿಗುವ ಚಟ್ನಿಯ ರುಚಿ ಮತ್ತು ಹದ ಮನೆಯಲ್ಲಿ ಸಿಗುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ ಮನೆಯಲ್ಲಿಯೇ ಹೋಟೆಲ್ ಶೈಲಿಯ ರುಚಿಕರ ತೆಂಗಿನಕಾಯಿ ಚಟ್ನಿ ತಯಾರಿಸಬಹುದು.
ರುಚಿಕರವಾದ ಚಟ್ನಿಗಾಗಿ ಒಂದು ಕಪ್ ತಾಜಾ ತೆಂಗಿನಕಾಯಿ ತುರಿ, ಕಾಲು ಕಪ್ ಹುರಿಗಡಲೆ (ಪುಟಾಣಿ), 3-4 ಹಸಿಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, 2 ಎಸಳು ಬೆಳ್ಳುಳ್ಳಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಬೇಕು. ಹೋಟೆಲ್ ಶೈಲಿಯ ಹಸಿರು ಬಣ್ಣ ಮತ್ತು ವಿಶಿಷ್ಟ ರುಚಿಗಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ 4-5 ಪುದೀನಾ ಎಲೆಗಳನ್ನು ಸೇರಿಸುವುದು ಉತ್ತಮ.
ಈ ಎಲ್ಲ ಪದಾರ್ಥಗಳಿಗೆ ಸ್ವಲ್ಪ ನೀರು ಸೇರಿಸಿ ಹದವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಬೇಕು. ಬಳಿಕ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ನೀಡಿ ಚಟ್ನಿಗೆ ಸೇರಿಸಿದರೆ ಸವಿಯಾದ ಹೋಟೆಲ್ ಸ್ಟೈಲ್ ತೆಂಗಿನಕಾಯಿ ಚಟ್ನಿ ಸಿದ್ಧವಾಗುತ್ತದೆ.
ಬಿಸಿ ಬಿಸಿ ಇಡ್ಲಿ, ಗರಿಗರಿ ದೋಸೆ, ವಡೆ ಅಥವಾ ಪೂರಿಯೊಂದಿಗೆ ಈ ಚಟ್ನಿ ಸವಿದರೆ ಅದರ ರುಚಿಯೇ ಬೇರೆ!

