ಮಂಗಳೂರು:ದ ಕ ಜಿಲ್ಲಾ ಪ ಪೂ ಕಾಲೇಜು ಪ್ರಾಚಾರ್ಯರ ಸಂಘ ಹಾಗೂ ಉಪನ್ಯಾಸಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ನೇಮಕಾತಿ ನಿಯಮ 2013ಕ್ಕೆ 2026ರ ಕರಡು ತಿದ್ದುಪಡಿ ಪ್ರಸ್ತಾವನೆ ದಿ. 18-6- 2026 ರ ಪ್ರಕಾರ ಹೊರಡಿಸಿದ ಪ್ರಸ್ತಾವನೆಯನ್ನು ಸಂಘ ಖಂಡಿಸಿರುತ್ತದೆ ಎಂದು ಅಧ್ಯಕ್ಷ ನಂತೂರು ಡಾ ಎನ್ ಎಸ್ ಎ ಎಂ ಪಿ ಯು ಕಾಲೇಜಿನ ಡಾ.ನವೀನ್ ಶೆಟ್ಟಿ ಕೆ ತಿಳಿಸಿದರು.
ಎಸ್ ಇ ಪಿ ಜಾರಿಯ ಈ ಹಂತದಲ್ಲಿ ಇಂತಹ ನಿಯಮಗಳ ತುರ್ತು ಬದಲಾವಣೆ ಅಗತ್ಯವಿಲ್ಲ. ಶಿಕ್ಷಣ ತಜ್ಞರ ಸಮಿತಿಯ ಮೂಲಕ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ಅಗತ್ಯವಾಗಿರುತ್ತದೆ. ವಿವಿಧ ನೇಮಕಾತಿ ವಿಧಾನ, ವಿವಿಧ ಬೋಧನಾ ಕ್ರಮ ಇರುವಾಗ ಶಿಕ್ಷಣ ವ್ಯವಸ್ಥೆಯ ಸಂರಚನೆಯನ್ನು ಪುನರ್ವಿನ್ಯಾಸ ಮಾಡಿಕೊಳ್ಳದೆ, ಈ ರೀತಿಯ ನಿಯಮ ರೂಪಿಸಲು ಹೊರಟಿರುವುದು ಏಕರೂಪದ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ವಿಠ್ಠಲ ಎ ಸ್ಪಷ್ಟಪಡಿಸಿದರು.

ಶಿಕ್ಷಣದಲ್ಲಿ ಸುಧಾರಣೆ ತರುವ ಸಂದರ್ಭದಲ್ಲಿ ಪ್ರಾಥಮಿಕ ಅಥವಾ ಮೂಲ ಹಂತದ ಶಿಕ್ಷಣದಿಂದಲೇ ನಿಯಮಗಳನ್ನು ಜಾರಿಗೆ ತರುವುದು ಮತ್ತು ಸಮರ್ಪಕವಾಗಿ ಉತ್ತರದಾಯಿತ್ವವನ್ನು ನಿರ್ಧರಿಸಿಕೊಳ್ಳುವ ಅಗತ್ಯವಿರುತ್ತದೆ. ಈ ಪ್ರಸ್ತಾವನೆಯಿಂದ ಒಬ್ಬನೇ ಶಿಕ್ಷಕ ಹೈಸ್ಕೂಲ್ನಲ್ಲಿ ಅಧ್ಯಾಪನ ಗೈದರೆ, ಪಿ ಯು ತರಗತಿಗಳಲ್ಲಿ ಉಪನ್ಯಾಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅದೇ ರೀತಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಎರಡು ಕಡೆ ಪಬ್ಲಿಕ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡಬೇಕಾದ ಅನಿವಾರ್ಯತೆಯು ಇರುತ್ತದೆ. ಇದರಿಂದ ನಿಯೋಜಿತ ಉಪನ್ಯಾಸಕರು ಅತೀವ ಒತ್ತಡವನ್ನು ಹೊಂದಬೇಕಾಗುತ್ತದೆ. ಅಲ್ಲದೆ ಬಡ್ತಿಯ ಉದ್ದೇಶವೇ ನಿರರ್ಥಕವಾಗುತ್ತದೆ ಎಂದು ಸಮಜಾಯಿಸಿಕೆ ನೀಡಿದರು.
ಸರ್ಕಾರಿ, ಅನುದಾನಿತ, ಖಾಸಗಿ, ಹೈಸ್ಕೂಲು, ಪಿಯು, ಪಿಎಂಶ್ರೀ, ಕೆಪಿಎಸ್ ಇತ್ಯಾದಿ ವೈವಿಧ್ಯತೆಗಳನ್ನು ಸಮಾನಗೊಳಿಸುವ ಮೊದಲು ಮತ್ತಷ್ಟು ಗೋಜಲು ಗೊಳಿಸಲು ಹೊರಟಿರುವ ಸರಕಾರದ ಕ್ರಮವನ್ನು ಸಂಘದ ಸರ್ವ ಸದಸ್ಯರು ಖಂಡಿಸಿರುತ್ತಾರೆ ಎಂದು ತಿಳಿಸಿದರು. ಇಂತಹ ಉಪಕ್ರಮದಿಂದ ಫಲಿತಾಂಶ, ಶಿಕ್ಷಣದ ಗುಣಮಟ್ಟ ಇತ್ಯಾದಿಗಳ ಮೇಲೆ ವ್ಯತ್ಯರಿಕ್ತ ಪರಿಣಾಮ ಉಂಟಾಗಬಹುದು. ವಿದ್ಯಾರ್ಥಿ ಕೇಂದ್ರಿತ, ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವಿಚಲಿತಗೊಳ್ಳದೆ ಇರಲಿ ಎಂದು ಆಶಿಸಿ ಆತುರದ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆದು ಎಲ್ಲ ಉಪನ್ಯಾಸಕರಿಗೆ ಮಾನಸಿಕ ನೆಮ್ಮದಿಯನ್ನು ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು. ಇಲ್ಲವಾದಲ್ಲಿ ಸಂಘಟಿತ ಹೋರಾಟವನ್ನು ಪ್ರಜಾಸತ್ತಾತ್ಮಕವಾಗಿ ನಡೆಸಲಾಗುವುದು ಎಂದೂ ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರ ಸಂಘದ ಪ್ರತಿನಿಧಿ ಬದ್ರಿಯಾ ಕಾಲೇಜಿನ ಸೀಮಾ, ದ ಕ ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಹರಿಪ್ರಕಾಶ್ ಬಿ, ಕೋಶಾಧಿಕಾರಿ ಸಚಿನ್ ಸುವರ್ಣ, ಎಸ್ ಸೀನಪ್ಪ ಎನ್ , ನವೀನ್ ಶೆಟ್ಟಿ, ಹಾಜರಿದ್ದರು.
.

