ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ; ಕೇವಲ ಪ್ರಯಾಣ ದಾಖಲೆ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ..!

0
43

ನವದೆಹಲಿ : ಪಾಸ್‌ಪೋರ್ಟ್ ಅನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಬಳಸುವ ಕುರಿತು ಸಾರ್ವಜನಿಕರಲ್ಲಿ ಉಂಟಾಗಿದ್ದ ಗೊಂದಲಕ್ಕೆ ವಿದೇಶಾಂಗ ಸಚಿವಾಲಯ (MEA) ಸ್ಪಷ್ಟನೆ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ಅಧಿಕೃತ ದಾಖಲೆಯಾಗಿದ್ದು, ಅದನ್ನು ಪೌರತ್ವದ ಅಂತಿಮ ಪುರಾವೆಯಾಗಿ ಪರಿಗಣಿಸಬಾರದು ಎಂದು ಸಚಿವಾಲಯ ತಿಳಿಸಿದೆ.

ಪಾಸ್‌ಪೋರ್ಟ್ ಸೇವೆಗಳ ಸುಧಾರಣೆ ಹಾಗೂ ಜಾಗತಿಕ ಸಂಚಾರ ಸೌಲಭ್ಯಗಳ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಈ ಮಾಹಿತಿ ಬಹಿರಂಗಪಡಿಸಲಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದ ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆ ವೇಗಗೊಂಡಿದ್ದು, ಈಗ ಅರ್ಜಿ ಸಲ್ಲಿಸಿದ ಬಳಿಕ ಕೇವಲ ಐದು ಕೆಲಸದ ದಿನಗಳಲ್ಲಿ ಪಾಸ್‌ಪೋರ್ಟ್ ಪಡೆಯುವ ಅವಕಾಶ ಲಭ್ಯವಾಗಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಅರ್ಜಿದಾರರು ಕಳೆಯುವ ಸಮಯವೂ 45 ನಿಮಿಷಗಳಿಗಿಂತ ಕಡಿಮೆಯಾಗಿದೆ.

ಕಳೆದ ವರ್ಷದಿಂದ ವಿತರಿಸಲಾಗುತ್ತಿರುವ ಹೊಸ ಪಾಸ್‌ಪೋರ್ಟ್‌ಗಳಲ್ಲಿ ಬಯೋಮೆಟ್ರಿಕ್ ಮಾಹಿತಿಯುಳ್ಳ ಸುರಕ್ಷಿತ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಅಳವಡಿಸಲಾಗುತ್ತಿದ್ದು, ಇ-ಪಾಸ್‌ಪೋರ್ಟ್ ವ್ಯವಸ್ಥೆ ನಕಲಿ ಪಾಸ್‌ಪೋರ್ಟ್‌ಗಳ ವಿರುದ್ಧ ಪರಿಣಾಮಕಾರಿ ಕ್ರಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಪಾಸ್‌ಪೋರ್ಟ್ ಸೇವೆಗಳ ವಿಸ್ತರಣೆಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. 2027ರ ವೇಳೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕನಿಷ್ಠ ಒಂದು ಪಾಸ್‌ಪೋರ್ಟ್ ಕೇಂದ್ರ ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಈ ವರ್ಷ 20 ಹೊಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ದೂರದ ಗ್ರಾಮೀಣ ಪ್ರದೇಶಗಳಿಗಾಗಿ ಮೊಬೈಲ್ ಪಾಸ್‌ಪೋರ್ಟ್ ತಂಡಗಳನ್ನೂ ನಿಯೋಜಿಸಲಾಗುತ್ತಿದೆ.

ಇಷ್ಟೆಲ್ಲಾ ಸೌಲಭ್ಯಗಳಿದ್ದರೂ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.10ರಷ್ಟು ಜನರ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ವಿದೇಶದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಪ್ರವಾಸಕ್ಕಾಗಿ ತೆರಳುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಸೇವೆಗಳನ್ನು ಇನ್ನಷ್ಟು ಜನಸಾಮಾನ್ಯರಿಗೆ ತಲುಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದೇ ವೇಳೆ, ಭಾರತೀಯ ನಾಗರಿಕರಿಗೆ ಜಾಗತಿಕ ಸಂಚಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ 27 ದೇಶಗಳು ವೀಸಾ-ಮುಕ್ತ ಪ್ರವೇಶ, 47 ದೇಶಗಳು ವೀಸಾ ಆನ್ ಅರೈವಲ್ ಹಾಗೂ 66 ದೇಶಗಳು ಇ-ವೀಸಾ ಸೌಲಭ್ಯ ಒದಗಿಸುತ್ತಿವೆ. ವಿದೇಶ ಉದ್ಯೋಗಕ್ಕಾಗಿ ತೆರಳುವ ಕಾರ್ಮಿಕರಿಗೆ ಅನುಕೂಲವಾಗುವಂತೆ ಜಾರಿಗೆ ತರಲಾದ ‘ಇ-ಮೈಗ್ರೇಟ್ 2.0’ ಪೋರ್ಟಲ್ ಮೂಲಕ ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here