ಕೋತಿಗಳಿಗೆ ಹಣ್ಣು ನೀಡಲು ಹೋಗಿ ಅನಾಹುತ..! ಬೆಟ್ಟದಿಂದ ಬಿದ್ದು ನವವಿವಾಹಿತೆ ದಾರುಣ ಸಾವು..!

0
63

ತಮಿಳುನಾಡು : ಕೋತಿಗಳ ಹಿಂಡು ಏಕಾಏಕಿ ಸುತ್ತುವರೆದಿದ್ದರಿಂದ ಗಾಬರಿಗೊಂಡ ನವವಿವಾಹಿತೆಯೊಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿ ಬೆಟ್ಟದಿಂದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈಯಲ್ಲಿ ನಡೆದಿದೆ.

ಮೃತರನ್ನು ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳಷ್ಟೇ ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ (29) ಅವರೊಂದಿಗೆ ಅನಿತಾ ಅವರ ವಿವಾಹವಾಗಿತ್ತು. ಇತ್ತೀಚೆಗೆ ಊರಿಗೆ ಬಂದಿದ್ದ ಸುರೇಶ್ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಲು ದಂಪತಿ ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ದಂಪತಿ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣುಗಳನ್ನು ನೀಡಲು ಮುಂದಾಗಿದ್ದರು. ಹಣ್ಣುಗಳನ್ನು ಕಂಡು ಹತ್ತಾರು ಕೋತಿಗಳು ಏಕಾಏಕಿ ಅನಿತಾ ಅವರನ್ನು ಸುತ್ತುವರೆದಿವೆ.

ಕೋತಿಗಳ ಹಿಂಡನ್ನು ಕಂಡು ಭಯಭೀತರಾದ ಅನಿತಾ ಅಲ್ಲಿಂದ ಹಿಂದೆ ಸರಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲು ಜಾರಿ ಬೆಟ್ಟದ ಕಂದಕಕ್ಕೆ ಬಿದ್ದಿದ್ದಾರೆ. ಪರಿಣಾಮ ತೀವ್ರ ಗಾಯಗೊಂಡ ಅವರು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಣ್ಣೆದುರೇ ಪತ್ನಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ದೃಶ್ಯವನ್ನು ಕಂಡ ಪತಿ ಸುರೇಶ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಬೆಟ್ಟದ ಪ್ರದೇಶಗಳಲ್ಲಿ ಕೋತಿಗಳಿಗೆ ಆಹಾರ ನೀಡುವ ವೇಳೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here