ಉಡುಪಿ : ಶಂಕರಪುರದ ಸುಭಾಷ್ ನಗರದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಶನಿವಾರ ರಾತ್ರಿ ಕಿಡಿಗೇಡಿಗಳು ಕಾರಿಗೆ ಡಿಸೇಲ್ ತುಂಬಿಸಿ ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ. ಈ ಬಗ್ಗೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮಂಗಳವಾರ ಶಿರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂವರು ಯುವಕರು ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಪೆಟ್ರೋಲ್ ಬಂಕ್ಗೆ ಬಂದು ವಾಹನಕ್ಕೆ ಡೀಸೆಲ್ ಹಾಕುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂದಿ 4,711 ರೂ. ಮೌಲ್ಯದ ಡೀಸೆಲ್ ತುಂಬಿಸಿದ್ದಾರೆ. ಬಳಿಕ ಬಿಲ್ ಸಿದ್ಧಪಡಿಸುವಂತೆ ಹೇಳಿದ ಆರೋಪಿಗಳು ಹಣ ಪಾವತಿಸದೆ ಏಕಾಏಕಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಾರಿನಲ್ಲಿದ್ದವರು ತುಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದು, ಆರೋಪಿಗಳು ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದು, ಕಾರಿನೊಳಗೆ ಬಿಯರ್ ಬಾಟಲಿಗಳು ಹಾಗೂ ಚಿಪ್ಸ್ ಪ್ಯಾಕೆಟ್ಗಳು ಪತ್ತೆಯಾಗಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಕಾರಿನ ಗಾಜುಗಳಿಗೆ ಕಪ್ಪು ಫಿಲ್ಮ್ ಅಳವಡಿಸಲಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಸವಾಲಾಗಿದೆ.

