ಮಂಗಳೂರು : ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗೋರಿ ಪ್ರದೇಶದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆಯ ಪರಿಣಾಮ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಅತ್ಯಂತ ದುಃಖಕರವಾಗಿದ್ದು, ತುಳುನಾಡ ರಕ್ಷಣಾ ವೇದಿಕೆ ಈ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ದುರಂತದಲ್ಲಿ ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ವೇದಿಕೆ ಪ್ರಾರ್ಥಿಸಿದೆ.

ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರೀ ಮಳೆಯ ಸಂದರ್ಭಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತದಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಹಿಂದೆಯೂ ಇದೇ ರೀತಿಯ ದುರಂತಗಳು ಸಂಭವಿಸಿದ್ದರೂ, ಅಪಾಯದ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಇನ್ನಷ್ಟು ಜಾಗರೂಕತೆ ವಹಿಸಬೇಕಾಗಿದೆ. ಇಂತಹ ಜೀವಹಾನಿ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ಭೂಕುಸಿತದಲ್ಲಿ ಮನೆ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಆರು ಮಂದಿ ಮಣ್ಣಿನಡಿ ಸಿಲುಕಿದ್ದು, ಸ್ಥಳೀಯರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ತಂಡದ ತ್ವರಿತ ಕಾರ್ಯಾಚರಣೆಯಿಂದ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಆದರೆ ಮೂವರು ಮೃತಪಟ್ಟಿರುವುದು ಅತ್ಯಂತ ದುರಂತಕರ ಬೆಳವಣಿಗೆಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ತುಳುನಾಡ ರಕ್ಷಣಾ ವೇದಿಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ,
• ಮೃತರ ಕುಟುಂಬಕ್ಕೆ ತಕ್ಷಣವೇ ಸಮರ್ಪಕ ಪರಿಹಾರ ಹಾಗೂ ಅಗತ್ಯ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು.
• ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
• ಜಿಲ್ಲೆಯ ಎಲ್ಲಾ ಭೂಕುಸಿತ ಅಪಾಯ ಪ್ರದೇಶಗಳ ವೈಜ್ಞಾನಿಕ ಸಮೀಕ್ಷೆ ನಡೆಸಿ, ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.
• ಗುಡ್ಡ ಪ್ರದೇಶಗಳಲ್ಲಿ ಅಕ್ರಮ ಮಣ್ಣು ತೆಗೆಯುವಿಕೆ, ಬೆಟ್ಟ ಕಡಿಯುವಿಕೆ ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
• ಮುಂಗಾರು ಅವಧಿಯಲ್ಲಿ ಅಪಾಯದ ಪ್ರದೇಶಗಳ ನಿರಂತರ ನಿಗಾವಹಿಸಿ, ಜೀವಹಾನಿ ತಡೆಯಲು ಶಾಶ್ವತ ವಿಪತ್ತು ನಿರ್ವಹಣಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
“ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಈ ದುರಂತ ಇಡೀ ಮಂಗಳೂರು ನಗರವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ದೀರ್ಘಕಾಲಿಕ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ ಜೀವಗಳ ರಕ್ಷಣೆ ಎಲ್ಲಕ್ಕಿಂತ ಪ್ರಮುಖ ಆದ್ಯತೆಯಾಗಬೇಕು” ಎಂದು ಯೋಗೀಶ್ ಶೆಟ್ಟಿ ಜಪ್ಪು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

