ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಾರಂಭ

0
31

ಉಡುಪಿ : ಅರ್ಹ ನಾಗರಿಕರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದೇ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಖ್ಯ ಉದ್ದೇಶವಾಗಿದೆ. ಈ ಅವಧಿಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ಇಂದ್ರಾಳಿ, ಕುಂಜಿಬೆಟ್ಟು, ಕಾಡಬೆಟ್ಟು, ಪಣಿಯಾಡಿ ವಾರ್ಡ್​ಗಳಿಗೆ ಭೇಟಿ ನೀಡಿ ಮಾತನಾಡಿದರು.

ಈಗಾಗಲೇ ಪೂರ್ವಸಿದ್ಧತಾ ಕಾರ್ಯ ನಡೆದಿವೆ. ಜೂನ್​ 30 ರಿಂದ ಜುಲೈ 29 ರ ವರೆಗೆ ಬಿಎಲ್​ಒಗಳು ಮನೆ ಮನೆ ಸಮೀಕ್ಷೆ ಭೇಟಿ ನೀಡಿ, ಎನ್ಯುಮರೇನ್​ ಫಾಮ್​ರ್ಗಳನ್ನು ನೀಡಿ, ಸಾರ್ವಜನಿಕರಿಂದ ಭರ್ತಿ ಮಾಡಲಾದ ಗಣತಿ ನಮೂನೆಗಳನ್ನು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆಯಲಿದ್ದಾರೆ. ಭರ್ತಿ ಮಾಡಿದ ಫಾರಂಗಳ ಮೇಲೆ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿ ಇರಬೇಕು ಎಂದರು.

ಆಗಸ್ಟ್​ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಇದರ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್​ 5 ರಿಂದ ಸೆಪ್ಟೆಂಬರ್​ 4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್​ 5 ರಿಂದ ಅ. 3 ರವರೆಗೆ ಅರ್ಜಿ ವಿಲೇವಾರಿ ನಡೆಸಿ, ಅ. 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಉಡುಪಿ ಕೃಷ್ಣ ಮಠಕ್ಕೆ ತೆರಳಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ತಿಳಿಸಿ, ಎನುಮರೇಷನ್ ಅರ್ಜಿಯನ್ನು ನೀಡಿದರು.

ಸಗ್ರಿ ವಾರ್ಡ್​ನ ಬಿ.ಎಲ್​.ಒ ಪ್ರಮೋದಾ ಮಾತನಾಡಿ, ಮತದಾರರಿಗೆ ಗಣತಿ ನಮೂನೆಯ ಎರಡೂ ಪ್ರತಿಗಳನ್ನು ನೀಡುತ್ತಿದ್ದೇವೆ. ಮತದಾರರು ಎರಡನ್ನೂ ಭರ್ತಿ ಮಾಡಿ, ನಂತರ ಭಾವಚಿತ್ರ ಅಂಟಿಸಿ, ಸಹಿ ಮಾಡಬೇಕು. ಒಂದು ಪ್ರತಿಯನ್ನು ನಮಗೆ ನೀಡಿ, ಮತ್ತೊಂದು ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರೆಗೂ ಇದೇ ನಿಯಮ ಅನ್ವಯವಾಗಲಿದೆ ಎಂದರು.

ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದಾಗ ಮನೆಯಲ್ಲಿ ಜನರಿದ್ದು, ಗಣತಿ ನಮೂನೆಗಳನ್ನು ಸ್ವೀಕರಿಸಿದರೆ ಅಂತಹ ಮನೆಗಳಿಗೆ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್​ ಹಾಗೂ ಮನೆಗೆ ಬೀಗ ಹಾಕಿದ್ದರೆ ಕೆಂಪುಬಣ್ಣದ ವೃತ್ತಾಕಾರದ ಸ್ಟಿಕ್ಕರ್​ ಅಂಟಿಸಲಾಗುವುದು ಎಂದರು.

ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್​ ಮೌಲ ಮಾತನಾಡಿ, ಜಿಲ್ಲಾಧಿಕಾರಿಗಳು ಮತ್ತು ಬಿ.ಎಲ್​.ಒ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಅಂಗವಾಗಿ ಎನ್ಯುಮರೇಶ ಫಾಮ್​ರ್ ನೀಡಿದ್ದಾರೆ. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗುವುದು ಎಂದರು. ಉಡುಪಿ ತಹಶೀಲ್ದಾರ್​ ಗುರುರಾಜ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here