ಸತೀಶ್ ಪೂಜಾರಿ ಕೀಳಿಂಜೆ ಮನವಿಗೆ ಸ್ಪಂದನೆ: ಸರಸ್ವತಿ ನಗರ ಸಂಪರ್ಕ ರಸ್ತೆ ಕಾಂಕ್ರೀಟೀಕರಣ

0
11

ಉಡುಪಿ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬ್ಬುಸ್ವಾಮಿ ದೇವಸ್ಥಾನದ ಹಿಂಭಾಗದಿಂದ ಸರಸ್ವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಬಹುವರ್ಷಗಳಿಂದ ಮಣ್ಣಿನ ರಸ್ತೆಯಾಗಿದ್ದು, ಮಳೆಗಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಇದೀಗ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ನಡೆದಿದ್ದು, ಸ್ಥಳೀಯರ ಬಹುವರ್ಷಗಳ ಬೇಡಿಕೆ ಈಡೇರಿದೆ.

ರಸ್ತೆಯ ಸಮಸ್ಯೆಯನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಿಂಜೆ ಅವರ ಗಮನಕ್ಕೆ ತಂದಿದ್ದರು. ಬಳಿಕ ಅವರು ಸಮಸ್ಯೆಯನ್ನು ಪತ್ರಿಕೆಯ ಮೂಲಕ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಸಾರ್ವಜನಿಕರ ಹಾಗೂ ವಸತಿ ನಿವಾಸಿಗಳ ಅನುಕೂಲಕ್ಕಾಗಿ ರಸ್ತೆಯನ್ನು ಶೀಘ್ರ ಕಾಂಕ್ರೀಟೀಕರಣಗೊಳಿಸುವಂತೆ ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ಉಪ್ಪೂರು ಗ್ರಾಮ ಪಂಚಾಯಿತಿ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಿಶೇಷ ಮುತುವರ್ಜಿಯಿಂದ ರಸ್ತೆ ಕಾಂಕ್ರೀಟೀಕರಣಗೊಂಡಿದೆ. ಉಡುಪಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಮುಖಂಡರಾದ ಹೇರಿಯ ಉಪ್ಪೂರು ಸಾಲ್ಮರ ಅವರ ವಿಶೇಷ ಆಗ್ರಹವೂ ಕಾಮಗಾರಿ ಕೈಗೊಳ್ಳುವಲ್ಲಿ ನೆರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಹುವರ್ಷಗಳಿಂದ ಮಣ್ಣಿನ ರಸ್ತೆಯಾಗಿದ್ದ ಈ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಕಿರುವುದರಿಂದ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಸ್ತೆಯ ಅಭಿವೃದ್ಧಿಗೆ ಕಾರಣರಾದ ಜನಪ್ರತಿನಿಧಿಗಳು, ಉಪ್ಪೂರು ಗ್ರಾಮ ಪಂಚಾಯಿತಿ ಹಾಗೂ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ನಿರಂತರವಾಗಿ ಪ್ರಯತ್ನಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಿಂಜೆ ಅವರಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳನ್ನು ಪತ್ರಿಕೆಯ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸತೀಶ್ ಪೂಜಾರಿ ಕೀಳಿಂಜೆ ಅವರು ನಡೆಸುತ್ತಿರುವ ಸೇವೆಯನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.