ಕರ್ನಾಟಕದಲ್ಲಿ ಗುಟ್ಕಾ , ಪಾನ್ ಮಸಾಲಾ ವಿರುದ್ಧ ಕಠಿಣ ಕ್ರಮ..!

0
46

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುವ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ ರಾಜ್ಯವ್ಯಾಪಿ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಬುಧವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ 32 ಪಾನ್ ಮಸಾಲಾ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಪರೀಕ್ಷೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇಂದು ಈ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು, ಮೈಸೂರು, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬೆಳಗಾವಿ ಹಾಗೂ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಪಾನ್ ಮಸಾಲಾ ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಉತ್ಪನ್ನಗಳಲ್ಲಿ ನಿಷೇಧಿತ ಅಥವಾ ಅಮಲು ಉಂಟುಮಾಡುವ ಪದಾರ್ಥಗಳಿರುವ ಬಗ್ಗೆ ಪರೀಕ್ಷೆ ನಡೆಸಲು ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆಯಲ್ಲಿ ಇದು ದೃಢಪಟ್ಟರೆ, ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ನಿಷೇಧಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆಯ ಆಯುಕ್ತರು ಜೂನ್ 29ರಂದು ಎಲ್ಲ ಜಿಲ್ಲಾ ಅಧಿಕಾರಿಗಳಿಗೆ ಜ್ಞಾಪನ ಪತ್ರ ಹೊರಡಿಸಿ, ರಾಜ್ಯಾದ್ಯಂತ ವಿಶೇಷ ಪರಿಶೀಲನಾ ಅಭಿಯಾನ ನಡೆಸುವಂತೆ ಸೂಚಿಸಿದ್ದರು.

ಸೂಚನೆಯಂತೆ ಪಾನ್ ಮಸಾಲಾ ಹಾಗೂ ಪಾನ್‌ನಿಂದ ತಯಾರಿಸಲಾದ ಇತರೆ ಉತ್ಪನ್ನಗಳ ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ವಿಶ್ಲೇಷಣೆಗಾಗಿ ಕಳುಹಿಸುವುದು, ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸುವುದು ಹಾಗೂ ಕಾರ್ಯಾಚರಣೆಯ ಸಂಪೂರ್ಣ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಉತ್ಪನ್ನಗಳಲ್ಲಿ ಅಮಲು ಉಂಟುಮಾಡುವ ಅಥವಾ ನಿಷೇಧಿತ ಪದಾರ್ಥಗಳಿರುವುದು ದೃಢಪಟ್ಟರೆ, ಸಂಬಂಧಿತ ಉತ್ಪನ್ನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ರಾಜ್ಯದಲ್ಲಿ ವ್ಯಾಪಕ ನಿಷೇಧ ಜಾರಿಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here