ಉಡುಪಿ : ಹಾವಂಜೆ–ಉಪ್ಪೂರು–ಕೊಳಲಗಿರಿ, ಪರಾರಿ, ಕುಕ್ಕೆಹಳ್ಳಿ, ಆರೂರು ಹಾಗೂ ಕೊಳಲಗಿರಿ–ಮಣಿಪಾಲ ಸಂಪರ್ಕ ರಸ್ತೆಯ ದುರವಸ್ಥೆ ಕುರಿತು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಸಲ್ಲಿಸಿದ ಮನವಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತ್ವರಿತವಾಗಿ ಸ್ಪಂದಿಸಿದ್ದು, ರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿದೆ.
ರಸ್ತೆ ಹದಗೆಟ್ಟ ಕಾರಣ ಸಾರ್ವಜನಿಕರು ಹಾಗೂ ವಾಹನ ಸವಾರರು ಹಲವು ತಿಂಗಳುಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ನಿರಂತರವಾಗಿ ಹೋರಾಟ ನಡೆಸಿದ್ದ ಸತೀಶ್ ಪೂಜಾರಿ ಕೀಳಂಜೆ ಅವರ ಪ್ರಯತ್ನಕ್ಕೆ ಈಗ ಫಲ ದೊರೆತಿದ್ದು, ಶಾಸಕರ ಸೂಚನೆಯಂತೆ ತುರ್ತು ದುರಸ್ತಿ ಕಾಮಗಾರಿ ಆರಂಭವಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ಇದರೊಂದಿಗೆ, ರಸ್ತೆ ಸಂಪೂರ್ಣ ಡಾಮರೀಕರಣ ಅಥವಾ ಕಾಂಕ್ರೀಟೀಕರಣಕ್ಕಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಅಡಿಯಲ್ಲಿ ಸುಮಾರು ₹3 ಕೋಟಿ ಅನುದಾನ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಪರ್ಕ ರಸ್ತೆಗೆ ಹೊಸ ರೂಪ ಸಿಗುವ ನಿರೀಕ್ಷೆಯಿದೆ. ಈ ಅನುದಾನ ಮಂಜೂರಾಗಲು ಶಾಸಕ ಯಶ್‌ಪಾಲ್ ಸುವರ್ಣ ಅವರ ವಿಶೇಷ ಪ್ರಯತ್ನ, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಹೋರಾಟ ಹಾಗೂ ಮಾಧ್ಯಮಗಳ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾವಂಜೆ, ಉಪ್ಪೂರು, ಕೊಳಲಗಿರಿ, ಪರಾರಿ, ಕುಕ್ಕೆಹಳ್ಳಿ, ಆರೂರು ಹಾಗೂ ಮಣಿಪಾಲ ಭಾಗದ ಗ್ರಾಮಸ್ಥರು ಮತ್ತು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಶಾಸಕ ಯಶ್‌ಪಾಲ್ ಸುವರ್ಣ, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, ಜಿಲ್ಲಾ ಪಂಚಾಯಿತಿ, ಉಪ್ಪೂರು ಗ್ರಾಮ ಪಂಚಾಯಿತಿ ಹಾಗೂ ರಸ್ತೆ ಸಮಸ್ಯೆಯನ್ನು ನಿರಂತರವಾಗಿ ಬೆಳಕಿಗೆ ತಂದ ಪತ್ರಿಕಾ ಮಿತ್ರರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
“ಸಾರ್ವಜನಿಕರ ಸಂಕಷ್ಟವನ್ನು ಅರ್ಥಮಾಡಿಕೊಂಡು ತಕ್ಷಣ ಸ್ಪಂದಿಸಿದ ಶಾಸಕ ಯಶ್‌ಪಾಲ್ ಸುವರ್ಣ ಅವರ ಕಾರ್ಯ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ರಾಜಕೀಯ ಜವಾಬ್ದಾರಿಗಳನ್ನು ಅಲಂಕರಿಸಲಿ ಎಂಬುದು ನಮ್ಮ ಹಾರೈಕೆ,” ಎಂದು ಸತೀಶ್ ಪೂಜಾರಿ ಕೀಳಂಜೆ ತಿಳಿಸಿದ್ದಾರೆ.
ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಂಡು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

