ರೈಲ್ವೇ ಪೊಲೀಸರಿಂದ ಐದು ಅಪ್ರಾಪ್ತ ಬಾಲಕರ ರಕ್ಷಣೆ

0
59

ಉಡುಪಿ : ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಮನೆಯಿಂದ ಓಡಿಬಂದಿದ್ದ ಐದು ಜನ ಅಪ್ರಾಪ್ತ ಬಾಲಕರನ್ನು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.

ಮತ್ಸ್ಯಗಂಧ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಾರ್ಕೂರು ಮತ್ತು ಉಡುಪಿ ನಿಲ್ದಾಣಗಳ ಮಧ್ಯೆ ಟಿಕೆಟ್​ ತಪಾಸಣೆ ನಡೆಸುತ್ತಿದ್ದ ಮುಖ್ಯ ಟಿಕೆಟ್​ ಪರೀಕ್ಷಕಿ ಸವಿತಾ ಶೆಟ್ಟಿ ಅವರಿಗೆ ಸಾಮಾನ್ಯ ಬೋಗಿಯಲ್ಲಿದ್ದ ಐದು ಜನ ಬಾಲಕರು ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಅವರ ಚಲನವಲನಗಳು ಮತ್ತು ನಡವಳಿಕೆ ಅನುಮಾನಾಸ್ಪದವಾಗಿ ಕಂಡ ತಕ್ಷಣ ಸವಿತಾ ಆರ್​ಪಿಎಫ್​ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.

ರೈಲು ಉಡುಪಿ ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆ ಸನ್ನದ್ಧರಾಗಿದ್ದ ಆರ್​ಪಿಎಫ್​ ಕಾನ್​ಸ್ಟೇಬಲ್​ ಮುರಳಿಧರನ್​ ತಕ್ಷಣವೇ ಸಾಮಾನ್ಯ ಬೋಗಿಗೆ ಧಾವಿಸಿ, ಐದೂ ಜನ ಬಾಲಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಆರ್​ಪಿಎಫ್​ ಚೌಕಿಗೆ ಕರೆತಂದಿದ್ದಾರೆ.

ಮಕ್ಕಳಿಗೆ ಕೌನ್ಸೆಲಿಂಗ್​

ಆರ್​ಪಿಎಫ್​ ಅಧಿಕಾರಿಗಳು ಮಕ್ಕಳಿಗೆ ಉಪಾಹಾರ ನೀಡಿ, ಕೌನ್ಸೆಲಿಂಗ್​ ನಡೆಸಿದಾಗ ಬಾಲಕರು ಕೌಟುಂಬಿಕ ಕಾರಣ ಹಾಗೂ ಸಣ್ಣಪುಟ್ಟ ಮುನಿಸಿನಿಂದಾಗಿ ಯಾರಿಗೂ ತಿಳಿಸದೆ ಮನೆಯಿಂದ ಓಡಿಬಂದಿರುವುದು ಬೆಳಕಿಗೆ ಬಂದಿದೆ. ಮಕ್ಕಳು ಅಪ್ರಾಪ್ತರಾಗಿದ್ದರಿಂದ ಮುಂದಿನ ಕಾನೂನು ಪ್ರಕ್ರಿಯೆ ಮಕ್ಕಳ ರಕ್ಷಣಾ ಟಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.

ಪೋಷಕರ ಆಗಮನ

ಬೆಂಗಳೂರು ಆರ್​ಟಿ ನಗರ ನಿವಾಸಿಗಳಾದ ಬಾಲಕರಿಗೆ ದೊಡ್ಡಣಗುಡ್ಡೆ ಬಾಲಕರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ ಪೋಷಕರು ದಾಖಲೆಗಳನ್ನು ಸಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.

LEAVE A REPLY

Please enter your comment!
Please enter your name here