ಭೀಕರ ರಸ್ತೆ ದುರಂತ : ಕಂದಕಕ್ಕೆ ಬಸ್ ಉರುಳಿ 40 ಮಂದಿ ಸಾವು

0
32

ಕ್ವೆಟ್ಟಾ : ಪಾಕಿಸ್ತಾನದಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಒಂದಾಗಿ ಗುರುತಿಸಲ್ಪಡುವ ದುರ್ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ದುರ್ಘಟನೆ ಬಲೂಚಿಸ್ತಾನ್ ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳ ಗಡಿ ಭಾಗದಲ್ಲಿರುವ ಡಾನಾ ಸಾರ್ ಪ್ರದೇಶದಲ್ಲಿ ನಡೆದಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ಬಸ್ ತನ್ನಲ್ಲಿದ್ದ ಪ್ರಯಾಣಿಕರ ಜೊತೆಗೆ ಮಾರ್ಗಮಧ್ಯೆ ಕೆಟ್ಟು ನಿಂತಿದ್ದ ಮತ್ತೊಂದು ಬಸ್‌ನ ಪ್ರಯಾಣಿಕರನ್ನೂ ಹತ್ತಿಸಿಕೊಂಡಿತ್ತು. ಇದರಿಂದ ಬಸ್‌ನಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಮೃತದೇಹಗಳನ್ನು ಹೊರತೆಗೆಯುವ ಹಾಗೂ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಹಲವಾರು ಮೃತದೇಹಗಳು ತೀವ್ರವಾಗಿ ಜಜ್ಜಲ್ಪಟ್ಟಿರುವುದರಿಂದ ಗುರುತಿಸುವ ಕಾರ್ಯ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದ ಪರ್ವತ ಪ್ರದೇಶಗಳಲ್ಲಿ ಕಳಪೆ ರಸ್ತೆಗಳು, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅಜಾಗರೂಕ ಚಾಲನೆಯಿಂದ ಇಂತಹ ಭೀಕರ ಅಪಘಾತಗಳು ಆಗಾಗ ಸಂಭವಿಸುತ್ತಿವೆ. ಕಳೆದ ಮೇ ತಿಂಗಳಲ್ಲೂ ನಡೆದ ರಸ್ತೆ ಅಪಘಾತದಲ್ಲಿ 17 ಮಂದಿ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here