ಮೂಡುಬಿದಿರೆಯಲ್ಲಿ ಹೊಸ ಆನ್‌ಲೈನ್ ವಂಚನೆ ಜಾಲ ಸಕ್ರಿಯ : ವ್ಯಾಪಾರಿಗಳು, ಸಾರ್ವಜನಿಕರು ಎಚ್ಚರ!

0
25

ಮೂಡುಬಿದಿರೆ : ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಹಕರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚಕರು ಹೊಸ ತಂತ್ರದ ಮೂಲಕ ಹಣ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ಹರಿದಾಡುತ್ತಿದೆ.

ವಂಚಕರು ತಾವು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಎಂದು ಪರಿಚಯಿಸಿಕೊಂಡು ಅಂಗಡಿಗಳಿಗೆ ಕರೆ ಮಾಡುತ್ತಾರೆ. ಬಳಿಕ ವಿವಿಧ ವಸ್ತುಗಳಿಗೆ ಆರ್ಡರ್ ನೀಡಿ, ಅವುಗಳನ್ನು ಆಸ್ಪತ್ರೆಗೆ ತಲುಪಿಸುವಂತೆ ಸೂಚಿಸುತ್ತಾರೆ. ಬಿಲ್ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸುವುದಾಗಿ ನಂಬಿಕೆ ಮೂಡಿಸುತ್ತಾರೆ.

ಸ್ವಲ್ಪ ಸಮಯದ ಬಳಿಕ, ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸಿರುವಂತೆ ತೋರಿಸುವ ನಕಲಿ ಪಾವತಿ ಸಂದೇಶವನ್ನು ವ್ಯಾಪಾರಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಬಳಿಕ ತಪ್ಪಾಗಿ ಹೆಚ್ಚುವರಿ ಹಣ ವರ್ಗಾವಣೆಯಾಗಿದೆ ಎಂದು ಹೇಳಿ, ಆ ಮೊತ್ತವನ್ನು ಮತ್ತೊಂದು ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಮರಳಿ ಕಳುಹಿಸುವಂತೆ ಒತ್ತಾಯಿಸುತ್ತಾರೆ.

ವಂಚಕರ ಮಾತು ನಂಬಿ ಹಣವನ್ನು ಹಿಂದಿರುಗಿಸಿದರೆ ವ್ಯಾಪಾರಿಗಳು ತಮ್ಮದೇ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ, ಬ್ಯಾಂಕ್ ಖಾತೆಗೆ ಹಣ ನಿಜವಾಗಿ ಜಮೆಯಾಗಿದೆಯೇ ಎಂಬುದನ್ನು ಬ್ಯಾಂಕ್ ಅಥವಾ ಅಧಿಕೃತ ಪಾವತಿ ಅಪ್ಲಿಕೇಶನ್‌ನಲ್ಲಿ ಖಚಿತಪಡಿಸಿಕೊಳ್ಳದೆ ಯಾವುದೇ ಹಣವನ್ನು ಮರಳಿ ಕಳುಹಿಸಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಯಾವುದೇ ಅನುಮಾನಾಸ್ಪದ ಕರೆ, ನಕಲಿ ಪಾವತಿ ಸಂದೇಶ ಅಥವಾ ವಂಚನೆ ಪ್ರಯತ್ನ ಕಂಡುಬಂದರೆ ತಕ್ಷಣವೇ 112 ಸಹಾಯವಾಣಿ ಅಥವಾ ಸಂಬಂಧಿತ ಬ್ಯಾಂಕ್‌ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here