ಕಾರ್ಕಳ: ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೊಟ್ಟು ಗ್ರಾಮದ ನಿವಾಸಿ ಹಾಗೂ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಪ್ರಸಾದ್ ರಾಜು ಶೆಟ್ಟಿ (46) ಅವರು ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಜೂನ್ 29ರಂದು ಕಾರ್ಕಳಕ್ಕೆ ಆಗಮಿಸಿದ್ದರು.
ಜುಲೈ 2ರಂದು ರಾತ್ರಿ ಅರ್ಚನಾ ಬಾರ್‌ನಲ್ಲಿ ಊಟ ಮುಗಿಸಿ ಕೆಪ್ಲಬೆಟ್ಟುವಿನಲ್ಲಿರುವ ತಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ರಾತ್ರಿ ಸುಮಾರು 11 ಗಂಟೆಗೆ ಕೌಡೂರು ಗ್ರಾಮದ ಕೆಪ್ಲಬೆಟ್ಟು ಮೋರಿ ಸಮೀಪ ಪರಿಚಿತರಾದ ಶೈಲು ಹಾಗೂ ಪ್ರವೀಣ್ ಶೆಟ್ಟಿಯವರೊಂದಿಗೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಆರೋಪಿಯು ತನ್ನ ಸಂಬಂಧಿಕ ಯುವತಿಯ ಪ್ರೀತಿಯ ವಿಚಾರ ಪ್ರಸ್ತಾಪಿಸಿ, “ನನಗೆ ಏಕೆ ಬೈದಿದ್ದೀರಿ?” ಎಂದು ಪ್ರಶ್ನಿಸಿ, ಬಳಿಕ ಕೈಯಲ್ಲಿದ್ದ ದೊಣ್ಣೆಯಿಂದ ಪ್ರಸಾದ್ ರಾಜು ಶೆಟ್ಟಿಯವರ ತಲೆ ಹಾಗೂ ಎಡಗೈಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 118(1), 351(2) ಹಾಗೂ 352 ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

