ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಲ್ಲದೆ, ಪ್ರಭಾವಿ ಗಣ್ಯರ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಹಾಗೂ ಹನಿಟ್ರ್ಯಾಪ್ ಜಾಲ ನಡೆಸುತ್ತಿದ್ದ ಮಹಿಳೆಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಝೀನತ್ ಬಂಧಿತ ಆರೋಪಿ. ಈಕೆಯೊಂದಿಗೆ ಸಬೀನಾ ಇಲಿಯಾಸ್ ಹಾಗೂ ಇತರರು ಸೇರಿಕೊಂಡು ದೊಡ್ಡ ಮಟ್ಟದ ವಂಚನೆಯ ಜಾಲವನ್ನೇ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ
ಉಡುಪಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಆರೋಪಿತೆ ಜೀನತ್ ಪರಿಚಯವಾಗಿದ್ದಳು. ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಪ್ರಾರಂಭಿಸಿದ್ದರು. ಈ ವೇಳೆ ಜಮೀನು ಖರೀದಿಗೆ ಹೂಡಿಕೆ ಮಾಡುವ ಉದ್ದೇಶದಿಂದ ಉದ್ಯಮಿ ಜೀನತ್‌ಳಿಗೆ ಬರೋಬ್ಬರಿ 70 ಲಕ್ಷ ರೂಪಾಯಿ ಹಣ ನೀಡಿದ್ದರು. ಆದರೆ, ಆಕೆ ಆ ಹಣವನ್ನು ಜಮೀನು ಖರೀದಿಗೆ ಬಳಸದೆ, ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಸಿ ವಂಚಿಸಿದ್ದಾಳೆ.
ಕಚೇರಿಯಲ್ಲಿ ಸಿಕ್ಕಿತು ರಹಸ್ಯ ಪೆನ್‌ಡ್ರೈವ್!
ನಷ್ಟದ ಕಾರಣ ಉದ್ಯಮಿ ತನ್ನ ಹಳೆಯ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಅಲ್ಲಿ ಕೆಲವು ರಹಸ್ಯ ಕಡತಗಳು ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ಅದನ್ನು ಪರಿಶೀಲಿಸಿದಾಗ ಸಮಾಜದ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಇರುವುದು ಕಂಡುಬಂದಿದೆ. ಆರೋಪಿತೆ ಈ ವಿಡಿಯೋಗಳನ್ನು ಇಟ್ಟುಕೊಂಡು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ದಂಧೆ ನಡೆಸುತ್ತಿರುವುದು ಇದರಿಂದ ಬೆಳಕಿಗೆ ಬಂದಿದೆ.
ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ
ಉದ್ಯಮಿ ತಮಗೆ ವಂಚಿಸಿದ 70 ಲಕ್ಷ ರೂಪಾಯಿ ಹಣವನ್ನು ವಾಪಸ್ ಕೇಳಿದಾಗ, ಜೀನತ್ ಉದ್ಯಮಿಯ ಹೊಸ ಕಚೇರಿಗೆ ಬಂದು ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಉದ್ಯಮಿ ವಿರುದ್ಧವೇ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿದ್ದಾಳೆ. ಅಲ್ಲದೆ, ಉದ್ಯಮಿಯ ಅಶ್ಲೀಲ ವಿಡಿಯೋಗಳೂ ತನ್ನ ಬಳಿ ಇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಉದ್ಯಮಿಯ ಹೆಂಡತಿ-ಮಕ್ಕಳನ್ನು ಕಿಡ್ನಾಪ್ ಮಾಡಿ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ತಂಡದಿಂದ ಆರೋಪಿ ಬಂಧನ:
ಈ ಕುರಿತು ಉದ್ಯಮಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ತಂಡವು ಜುಲೈ 2 ರಂದು ಕಾರ್ಯಾಚರಣೆ ನಡೆಸಿ ಪಡುಬಿದ್ರೆಯ ಕಂಚಿನಡ್ಕದಲ್ಲಿ ಆರೋಪಿತೆ ಜೀನತ್‌ಳನ್ನು ದಸ್ತಗಿರಿ ಮಾಡಿದೆ. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

