ಉಡುಪಿ: ಮಣಿಪಾಲ ತಿರುವಿನಲ್ಲಿ ಇತೀಚೆಗೆ ಶಾಲಾ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ತಾನೇ ಬಸ್ ಚಾಲನೆ ಮಾಡಿ ಅಪಘಾತವೆಸಗಿ, ಬಳಿಕ ತಂದೆಯ ಮೇಲೆ ಸುಳ್ಳು ದೂರು ಹೊರಿಸಿದ್ದ ಕಂಡಕ್ಟರ್‌ನ ಅಸಲಿ ಮುಖವಾಡವನ್ನು ಮಣಿಪಾಲ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಬಯಲಿಗೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಾಲನ ಪರವಾನಿಗೆ ರಹಿತ ಬಸ್ ಚಾಲನೆ ಮಹಮ್ಮದ ರಾಹಿಜ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಜೂನ್ 25ರಂದು ಬೆಳಿಗ್ಗೆ 8:05ರ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಿಂಡಿಕೇಟ್ ಸರ್ಕಲ್ ಡೌನ್ ಬಳಿಯಲ್ಲಿ ಪೆರಂಪಳ್ಳಿಯ ‘ಅಲ್ ಇಬಾದ್ ಇಂಡಿಯನ್ ಶಾಲೆ’ಗೆ ಸೇರಿದ ಬಸ್ ಅಪಘಾತಕ್ಕೀಡಾಗಿತ್ತು. ಬಸ್‌ನಲ್ಲಿದ್ದ ಶಾಲಾ ಮಕ್ಕಳಿಗೆ ಗಾಯಗಳಾಗಿದ್ದವು. ಈ ವೇಳೆ ಬಸ್ ಕಂಡಕ್ಟರ್ ಆಗಿದ್ದ ಕಟಪಾಡಿ ನಿವಾಸಿ ಮಹಮ್ಮದ ರಾಹಿಜ್ ಮಣಿಪಾಲ ಪೊಲೀಸ್ ಠಾಣೆಗೆ ಬಂದು, “ನನ್ನ ತಂದೆ ರಿಜ್ವಾನ್ ಅವರು ಬಸ್ ಚಾಲನೆ ಮಾಡುತ್ತಿದ್ದು, ಅವರ ಬೇಜವಾಬ್ದಾರಿಯಿಂದಾಗಿ ಬಸ್ ಡಿವೈಡರ್ ಮೇಲೇರಿ ಅಪಘಾತ ಸಂಭವಿಸಿದೆ” ಎಂದು ದೂರು ನೀಡಿದ್ದನು. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಟ್ವಿಸ್ಟ್ ಕೊಟ್ಟ ಸಿಸಿಟಿವಿ ದೃಶ್ಯಾವಳಿ
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಮಣಿಪಾಲ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ ಪೊಲೀಸರಿಗೆ ತೀವ್ರ ಆಘಾತ ಕಾದಿತ್ತು! ಅಪಘಾತದ ಸಮಯದಲ್ಲಿ ಬಸ್ ಚಾಲನೆ ಮಾಡುತ್ತಿದ್ದುದು ತಂದೆ ರಿಜ್ವಾನ್ ಅಲ್ಲ, ಬದಲಿಗೆ ದೂರು ನೀಡಿದ್ದ ಮಗ ಮಹಮ್ಮದ ರಾಹಿಜ್ ಎಂಬುದು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ತನಿಖೆಯ ವೇಳೆ ಆರೋಪಿ ಮಹಮ್ಮದ ರಾಹಿಜ್‌ಗೆ ಯಾವುದೇ ಅಧಿಕೃತ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಎಂಬುದು ದೃಢಪಟ್ಟಿದೆ.
ಮಾಲೀಕರ ಮೇಲೂ ಕೇಸ್, ಆರೋಪಿ ಜೈಲಿಗೆ!
ಸತ್ಯಾಂಶ ಹೊರಬರುತ್ತಿದ್ದಂತೆ ಪೊಲೀಸರು ಪ್ರಕರಣಕ್ಕೆ ಹೊಸ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸುಳ್ಳು ದೂರು ನೀಡಿದ ಚಾಲಕ/ಕಂಡಕ್ಟರ್ ಮಹಮ್ಮದ ರಾಹಿಜ್ ಹಾಗೂ ಕಾನೂನು ಬಾಹಿರವಾಗಿ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಶಾಲಾ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜುಲೈ 3 ರಂದು ಆರೋಪಿ ಮಹಮ್ಮದ ರಾಹಿಜ್‌ನನ್ನು ದಸ್ತಗಿರಿ ಮಾಡಿದ ಮಣಿಪಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

