ಕಿನ್ನಿಗೋಳಿ: ವಿದ್ವಾಂಸ, ಅಧ್ಯಾಪಕ ಹಾಗೂ ಸಂಶೋಧಕರಾಗಿದ್ದ ದಿ| ಪು. ಶ್ರೀನಿವಾಸ ಭಟ್ ಕಟೀಲು ಅವರ ಸಂಸ್ಮರಣಾರ್ಥ ‘ಸ್ಮೃತಿ ದಿನ’ ಕಾರ್ಯಕ್ರಮವನ್ನು ಜುಲೈ 11, 2026ರ ಶನಿವಾರ ಅಪರಾಹ್ನ 3.30ಕ್ಕೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಯುಗಪುರುಷ ಪ್ರಕಟಣಾಲಯದ ಕೃತಿಯಾದ ‘ಪು. ಶ್ರೀ. ಸ್ಮೃತಿ’ ಸ್ಮರಣ ಗ್ರಂಥ ಹಾಗೂ ಮಣಿಪಾಲ ಯುನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಲೇಖನ ಸಂಪುಟ ‘ಪು. ಶ್ರೀ. ಸಂಸ್ಕೃತಿ ಸಂಪದ’ವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.
ಈ ಬಾರಿಯ ಪ್ರತಿಷ್ಠಿತ ‘ಪು. ಶ್ರೀ. ಪ್ರಶಸ್ತಿ’ಯನ್ನು ನಾಡಿನ ಹಿರಿಯ ವಿದ್ವಾಂಸ ಹಾಗೂ ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಹಿಸಲಿದ್ದು, ಬೆಂಗಳೂರಿನ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ ಎನ್. ಆಚಾರ್ಯ ಹಾಗೂ ಪ್ರದೀಪಕುಮಾರ್ ಕಲ್ಕೂರ ಪಾಲ್ಗೊಳ್ಳಲಿದ್ದಾರೆ.
ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆ ಗೈಯಲಿದ್ದಾರೆ. ಸಭೆಯ ನಂತರ ಡಾ. ಪಾಡೇಕಲ್ಲು ವಿಷ್ಣು ಭಟ್, ಶ್ರೀ ಡಿ. ಎಸ್. ಶ್ರೀಧರ ಕಿನ್ನಿಗೋಳಿ ಮುಂತಾದವರಿಂದ ಗ್ರಂಥ ವಿಮರ್ಶೆ ನಡೆಯಲಿದೆ.
ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದಿಂದ ‘ಶ್ರೀ ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ಜರುಗಲಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
- ಮಂದಾರ ರಾಜೇಶ್ ಭಟ್

