ಕಾಪು : ಬೆಳ್ಳರ್ಪಾಡಿ ಸುತ್ತುಬಲ್ಲೆಯಿಂದ ಬೆಳ್ಳರ್ಪಾಡಿ ಸರ್ಕಾರಿ ಶಾಲೆಯವರೆಗೆ ಸಂಪರ್ಕ ರಸ್ತೆ ನಿರ್ಮಿಸಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ, ತುಳುನಾಡು ರಕ್ಷಣಾ ವೇದಿಕೆ ಕಾಪು ತಾಲೂಕು ಘಟಕದ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಆರೋಗ್ಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಬೆಳ್ಳರ್ಪಾಡಿ ಗ್ರಾಮವು ಹಲವು ವರ್ಷಗಳ ಹಿಂದೆ ಹಿಂದುಳಿದ ಕುಗ್ರಾಮವೆಂದು ಗುರುತಿಸಲ್ಪಟ್ಟಿದ್ದು, ಗ್ರಾಮದ ಸಮಸ್ಯೆಗಳ ಕುರಿತು ಮಾಧ್ಯಮಗಳಲ್ಲಿಯೂ ವರದಿಗಳು ಪ್ರಕಟವಾಗಿದ್ದರೂ ಇಂದಿಗೂ ಮೂಲಭೂತ ಸೌಕರ್ಯವಾದ ರಸ್ತೆ ಸಂಪರ್ಕ ಕಲ್ಪಿಸದಿರುವುದು ಅತ್ಯಂತ ವಿಷಾದನೀಯ ಎಂದು ತಿಳಿಸಲಾಗಿದೆ.
ಬೆಳ್ಳರ್ಪಾಡಿ ಸುತ್ತುಬಲ್ಲೆಯಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ರೈತರು ಪ್ರತಿದಿನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಶಾಲೆಗೆ ತೆರಳಲು, ಗ್ರಾಮಸ್ಥರು ತಮ್ಮ ನಿತ್ಯದ ಕೆಲಸಗಳಿಗೆ, ದೇವಸ್ಥಾನಕ್ಕೆ ಹಾಗೂ ಇತರ ಅಗತ್ಯ ಕಾರ್ಯಗಳಿಗೆ ಇದೇ ಮಾರ್ಗವನ್ನು ಅವಲಂಬಿಸಬೇಕಾಗಿದ್ದು, ರಸ್ತೆಯ ದುಸ್ಥಿತಿಯಿಂದ ಓಡಾಟ ದುಸ್ತರವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸರಿಯಾದ ರಸ್ತೆ ಸಂಪರ್ಕದ ಕೊರತೆಯಿಂದ ವಿದ್ಯಾರ್ಥಿಗಳ ಹಾಜರಾತಿ ಕುಂಠಿತಗೊಂಡು ಬೆಳ್ಳರ್ಪಾಡಿ ಸರ್ಕಾರಿ ಶಾಲೆಯೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ರೈತರು ಹಾಲನ್ನು ಡೈರಿಗೆ ಸಾಗಿಸಲು ಹಾಗೂ ಗ್ರಾಮಸ್ಥರು ದೇವಸ್ಥಾನ ಸೇರಿದಂತೆ ಅಗತ್ಯ ಸ್ಥಳಗಳಿಗೆ ತೆರಳಲು ಪ್ರತಿದಿನ ಇದೇ ರಸ್ತೆಯನ್ನು ಬಳಸಬೇಕಾಗಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎಂದು ತಿಳಿಸಲಾಗಿದೆ.
ರಸ್ತೆ ಎಂಬುದು ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದರೂ ಈ ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸದಿರುವುದು ಅಭಿವೃದ್ಧಿಗೆ ಕನ್ನಡಿ ಹಿಡಿಯುವಂತಾಗಿದೆ. ಆದ್ದರಿಂದ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಬೆಳ್ಳರ್ಪಾಡಿ ಗ್ರಾಮ, ಸರ್ಕಾರಿ ಶಾಲೆ ಹಾಗೂ ದೇವಸ್ಥಾನಕ್ಕೆ ಶಾಶ್ವತ ಸಂಪರ್ಕ ರಸ್ತೆ ನಿರ್ಮಿಸಿ ಗ್ರಾಮಸ್ಥರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾದ್ಯಕ್ಷ ಪ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮೀಕ ಘಟಕ ಜಿಲ್ಲಾದ್ಯಕ್ಷ ಜಯ ಪೂಜಾರಿ ಲಕ್ಷ್ಮೀನಗರ, ಮಹಿಳಾ ಜಿಲ್ಲಾದ್ಯಕ್ಷೆ ನಾಗಲಕ್ಷ್ಮಿ, ಕಾಪು ತಾಲೂಕು ಮಹಿಳಾ ಅದ್ಯಕ್ಷೆ ಅನುಸೂಯಾ ಶೆಟ್ಟಿ, ಬೈರಂಪಳ್ಳಿ ಘಟಕ ಅದ್ಯಕ್ಷ ಕೃಷ್ಣಾನಂದ ನಾಯಕ್, ಮುಖಂಡರುಗಳಾದ ಗುಣಕರ ಶಿರೂರು ಹಾಲಕ್ಕಿ, ಪ್ರೀತಮ್ ಕಟಪಾಡಿ, ಶಂಕರ್ ಉಡುಪಿ, ಮನೋಜ್ ಕೆ.ಜಿ.ರೋಡ್, ಸುಬ್ರಮಣ್ಯ ಸರಳಬೆಟ್ಟು, ಕೃಷ್ಣಾನಂದ ಪೂಜಾರಿ, ಗಣೇಶ್ ಕುಲಾಲ್ ಬೈರಂಪಳ್ಳಿ ಹಾಗೂ ಶಿವಕುಮಾರ್ ಪೂಜಾರಿ ಬೈರಂಪಳ್ಳಿ ಉಪಸ್ಥಿತರಿದ್ದರು.

