ಅಡಿಕೆ ತೋಟಕ್ಕೆ ತೆರಳಿದ್ದ 62 ವರ್ಷದ ವೃದ್ಧ ನಾಪತ್ತೆ – ನದಿಯಲ್ಲಿ ಕೊಚ್ಚಿಹೋದ ಅನುಮಾನ

0
37

ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಭಾರೀ ಮಳೆಯ ನಡುವೆ ತೋಟಕ್ಕೆ ತೆರಳಿದ್ದ ವೃದ್ಧರೊಬ್ಬರು ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಾಪತ್ತೆಯಾದವರನ್ನು ಆಗುಂಬೆ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಳೂರು ಗ್ರಾಮದ ನಿವಾಸಿ ರಾಮಪ್ಪ (62) ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ಎಂದಿನಂತೆ ತಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ರಾಮಪ್ಪ ಅವರು ರಾತ್ರಿ ತಡವಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದರು.

ತೋಟದ ಸಮೀಪ ಹರಿಯುವ ನದಿಯ ದಂಡೆಯಲ್ಲಿ ರಾಮಪ್ಪ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದು, ಮಳೆಯ ಪರಿಣಾಮ ನದಿಯಲ್ಲಿ ನೀರಿನ ಹರಿವು ತೀವ್ರಗೊಂಡಿರುವ ಕಾರಣ ಕಾಲು ಜಾರಿ ಅಥವಾ ನದಿ ದಾಟುವ ವೇಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಸುದ್ದಿಯನ್ನು ಬರೆಯುವ ವೇಳೆಗೆ ರಾಮಪ್ಪ ಅವರ ಪತ್ತೆಯಾಗಿಲ್ಲ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹೊಳೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here