ಕೊಲ್ಲೂರು ದೇವಸ್ಥಾನದಲ್ಲಿ ಕಳ್ಳತನ : ಮೂವರು ಕಳ್ಳಿಯರ ಬಂಧನ

0
72

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಮಹಿಳಾ ಭಕ್ತರೊಬ್ಬರ ವ್ಯಾನಿಟಿ ಬ್ಯಾಗ್​ನಿಂದ 80,000 ರೂ. ನಗದು ಕಳ್ಳತನ ಮಾಡಿದ್ದ ಭದ್ರಾವತಿ ಮೂಲದ ಮೂವರು ಅಂತರಜಿಲ್ಲಾ ಮಹಿಳಾ ಕಳ್ಳಿಯರನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ ಕೇವಲ 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ಹೊಸಮನೆಯ ನೇತ್ರಾವತಿ (33), ಭೋವಿ ಕಾಲೋನಿಯ ಶಾರದಾ (50) ಮತ್ತು ದುರ್ಗಮ್ಮ (44) ಬಂಧಿತ ಆರೋಪಿಗಳು. ನಿಮಿಶಾ ಹಾಗೂ ಅವರ ಗಂಡ ಪ್ರಜೋಶ್​ ಅವರು ಜುಲೈ 5 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ಬೆಳಗ್ಗೆ ಸುಮಾರು 8:20ರ ವೇಳೆಗೆ ದೇವಸ್ಥಾನದ ಒಳಗೆ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದಾಗ, ನಿಮಿಶಾ ಅವರು ತಮ್ಮ ಕಂದು ಬಣ್ಣದ ವ್ಯಾನಿಟಿ ಬ್ಯಾಗ್​ನ ಜಿಪ್​ ತೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಒಳಗೆ ಪರಿಶೀಲಿಸಿದಾಗ 80,000 ನಗದು ಹಣವಿದ್ದ ಪರ್ಸ್​ ನಾಪತ್ತೆಯಾಗಿತ್ತು. ದೇವಸ್ಥಾನದ ಪರಿಸರದಲ್ಲಿ ಹುಡುಕಾಡಿದರೂ ಪರ್ಸ್​ ಸಿಗದಿದ್ದಾಗ, ಅವರು ಕೊಲ್ಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳು, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೋಟೋಗಳು ಮತ್ತು ತಾಂತ್ರಿಕ ಸಹಾಯದ ಮೂಲಕ ಆರೋಪಿಗಳನ್ನು ಕೇವಲ 24 ಗಂಟೆಗಳ ಒಳಗೆ ಪತ್ತೆ ಹಚ್ಚಿ ದಸ್ತಗಿರಿ ಮಾಡಿದೆ.

ಹಳೇ ಕಳ್ಳಿಯರು

ಬಂಧಿತ ಮಹಿಳೆಯರು ಹಳೇ ಕಳ್ಳಿಯರಾಗಿದ್ದು, ಇವರ ಮೇಲೆ ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ದುರ್ಗಮ್ಮವಿರುದ್ಧ ಮೈಸೂರಿನ ಲಸ್ಕರ್​ ಪೊಲೀಸ್​ ಠಾಣೆಯಲ್ಲಿ 1 ಹಾಗೂ ಭದ್ರಾವತಿಯ ಓಲ್ಡ್​ ಟೌನ್​ ಪೊಲೀಸ್​ ಠಾಣೆಯಲ್ಲಿ 1 ಸೇರಿ ಒಟ್ಟು 2 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಶಾರದಾ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್​ ಠಾಣೆಯಲ್ಲಿ 2 ಮತ್ತು ಮೈಸೂರಿನ ಅಶೋಕಪುರಂ ಪೊಲೀಸ್​ ಠಾಣೆಯಲ್ಲಿ 1 ಸೇರಿ ಒಟ್ಟು 3 ಕಳ್ಳತನ ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here