ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಈ ಬೆಳವಣಿಗೆಯೊಂದಿಗೆ ಸ್ಥಳೀಯ ತುಳುವರಿಗೆ ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ್ ಜೈನ್ ಆಗ್ರಹಿಸಿದ್ದಾರೆ.
ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು ಭಾಷೆಗೆ ಮಾನ್ಯತೆ ನೀಡುವ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆಯಾದರೂ, ಇದುವರೆಗೆ ನಿರೀಕ್ಷಿತ ಫಲ ದೊರೆತಿಲ್ಲ. ಜನಪ್ರತಿನಿಧಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತರುವಲ್ಲಿ ಇನ್ನಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರವು ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ನಟ ರಿಷಬ್ ಶೆಟ್ಟಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದನ್ನು ಉಲ್ಲೇಖಿಸಿದ ವಿಜಯ ಕುಮಾರ್ ಜೈನ್, ಈ ಯೋಜನೆಗಳ ಮೂಲಕ ಹೊಸ ಉದ್ಯೋಗಗಳು ಸೃಷ್ಟಿಯಾದರೆ ಅವುಗಳಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ತುಳುವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
“ಹೊರ ರಾಜ್ಯಗಳ ಅಥವಾ ಹೊರ ಜಿಲ್ಲೆಗಳ ಕಂಪನಿಗಳು ಬಂದು ಸ್ಥಳೀಯರನ್ನು ಕಡೆಗಣಿಸುವಂತಾಗಬಾರದು. ಅಭಿವೃದ್ಧಿಯ ಲಾಭ ಮೊದಲು ಇಲ್ಲಿನ ಜನರಿಗೆ ಸಿಗಬೇಕು. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ,” ಎಂದು ಅವರು ಹೇಳಿದರು.
ಕರಾವಳಿ ಜಿಲ್ಲೆಯ ಶಾಸಕರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತುಳು ಭಾಷೆಗೆ ಅಧಿಕೃತ ಮಾನ್ಯತೆ, ತುಳುನಾಡಿನ ಅಭಿವೃದ್ಧಿ ಹಾಗೂ ಸ್ಥಳೀಯ ಉದ್ಯೋಗ ಸೃಷ್ಟಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಬೇಕು ಎಂದು ಅವರು ಮನವಿ ಮಾಡಿದರು.
ಕಂಬಳ ಕ್ರೀಡೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಪ್ರಯತ್ನಗಳ ಮಾದರಿಯಲ್ಲೇ ತುಳು ಭಾಷೆ, ಸಂಸ್ಕೃತಿ ಮತ್ತು ತುಳುನಾಡಿನ ಸಮಗ್ರ ಅಭಿವೃದ್ಧಿಗೆ ಸಹ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ವಿಜಯ ಕುಮಾರ್ ಜೈನ್ ಆಗ್ರಹಿಸಿದರು.

