ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಕ್ಲಾಸಿಕ್ ಬಿಲ್ಡಿಂಗ್ ಎದುರು, ಕರಾವಳಿ ಬೈಪಾಸ್ ಸಮೀಪ ಹಾಗೂ ಕರಾವಳಿ ರಿಕ್ಷಾ ನಿಲ್ದಾಣದ ಹಿಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಪಕ್ಕದಲ್ಲಿದ್ದ ಅಪಾಯಕಾರಿ ಒಣಗಿದ ಮರವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಈ ಮರವು ಹಲವು ದಿನಗಳಿಂದ ಒಣಗಿ ಯಾವ ಕ್ಷಣದಲ್ಲಾದರೂ ರಸ್ತೆಗೆ ಉರುಳುವ ಅಪಾಯವಿದ್ದು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರು ಅರಣ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಮನವಿ ಪತ್ರ, ದೂರವಾಣಿ ಕರೆ ಮತ್ತು ಮಾಧ್ಯಮಗಳ ಮೂಲಕ ವಿಷಯವನ್ನು ತಂದಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು ಅಪಾಯಕಾರಿ ಮರವನ್ನು ತೆರವುಗೊಳಿಸಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ಸಮಸ್ಯೆಯಾಗಿದ್ದ ಈ ಮರವನ್ನು ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ತೆರವುಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಪೂಜಾರಿ ಕೀಳಂಜೆ, “ಮಳೆಗಾಲದಲ್ಲಿ ಒಣಗಿದ ಮರಗಳು ಮತ್ತು ಕೊಂಬೆಗಳು ರಸ್ತೆಗೆ ಉರುಳಿ ಜೀವಹಾನಿ ಸಂಭವಿಸುವ ಘಟನೆಗಳು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ. ಆದ್ದರಿಂದ ಉಡುಪಿ ಜಿಲ್ಲೆಯಾದ್ಯಂತ ರಸ್ತೆ ಬದಿಯಲ್ಲಿರುವ ಒಣಗಿದ ಮರಗಳು ಹಾಗೂ ಅಪಾಯಕಾರಿ ಕೊಂಬೆಗಳನ್ನು ಗುರುತಿಸಿ, ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಳೆಗಾಲದ ಮುನ್ನವೇ ಅಪಾಯಕಾರಿ ಮರಗಳ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

