ಕಾನೂನು ಕೈಗೆತ್ತಿಕೊಳ್ಳುವ ಸಂದೇಶ ಯಾವುದೇ ವೇದಿಕೆಯಿಂದ ಬರಬಾರದು; ಅಪರಾಧ ನಿಯಂತ್ರಣ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು: ಯೋಗೀಶ್ ಶೆಟ್ಟಿ ಜಪ್ಪು

0
18

ಮಂಗಳೂರು: ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಚಿವ ಯು.ಟಿ. ಖಾದರ್ ಅವರು ಅಪರಾಧ ನಿಯಂತ್ರಣ ಕುರಿತು ವ್ಯಕ್ತಪಡಿಸಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ನೀಡುವ ಪ್ರತಿಯೊಂದು ಹೇಳಿಕೆಯೂ ಕಾನೂನಿನ ಮಿತಿಯೊಳಗೆ ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿರಬೇಕು ಎಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಹೇಳಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಪ್ರತಿಯೊಬ್ಬ ನಾಗರಿಕನ ಆಶಯ. ಆದರೆ ಆ ಕ್ರಮ ನ್ಯಾಯಾಂಗ ವ್ಯವಸ್ಥೆ, ಪೊಲೀಸ್ ತನಿಖೆ ಹಾಗೂ ಕಾನೂನು ಪ್ರಕ್ರಿಯೆಯ ಮೂಲಕವೇ ಜರುಗಬೇಕು. ಕಾನೂನನ್ನು ಮೀರಿ ನಡೆಯುವ ಯಾವುದೇ ರೀತಿಯ ಕ್ರಮವನ್ನು ಪ್ರೋತ್ಸಾಹಿಸುವಂತ ಸಂದೇಶ ಸಮಾಜಕ್ಕೆ ಹೋಗಬಾರದು. ಇಂತಹ ಹೇಳಿಕೆಗಳು ಪೊಲೀಸ್ ಇಲಾಖೆಯ ವೃತ್ತಿಪರ ಕಾರ್ಯವೈಖರಿ ಮತ್ತು ನೈತಿಕ ಸ್ಥೈರ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಆಯುಕ್ತರಾದ ಸುಧೀರ್ ರೆಡ್ಡಿ ಮತ್ತು ಇತರ ಪೋಲಿಸ್ ಅಧಿಕಾರಿಗಳು ಕೋಮು ಸೂಕ್ಷ್ಮತೆ, ಸಂಘಟಿತ ಅಪರಾಧ ಹಾಗೂ ಸಮಾಜಘಾತುಕ ಚಟುವಟಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಸಮರ್ಥವಾಗಿ ನಿಯಂತ್ರಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರ ಸೇವೆಯನ್ನು ಶ್ಲಾಘಿಸುವ ಬದಲು ವಿವಾದಾತ್ಮಕ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದರು.

ಸರ್ಕಾರ ಅಪರಾಧ ನಿರ್ಮೂಲನೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು, ಪೊಲೀಸ್ ಇಲಾಖೆಗೆ ಅಗತ್ಯ ಸಂಪನ್ಮೂಲ, ತಂತ್ರಜ್ಞಾನ ಹಾಗೂ ಮಾನವಬಲ ಒದಗಿಸಬೇಕು. ಅಪರಾಧಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಶಿಕ್ಷೆ ಖಚಿತಪಡಿಸುವ ವ್ಯವಸ್ಥೆಯನ್ನು ಬಲಪಡಿಸಬೇಕೇ ಹೊರತು, ಕಾನೂನಿನ ಮಿತಿಯನ್ನು ಮೀರುವ ಸಂದೇಶಗಳು ಸಮಾಜದಲ್ಲಿ ಆತಂಕ ಉಂಟುಮಾಡಬಾರದು ಎಂದು ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು.

ಪ್ರಜಾಪ್ರಭುತ್ವದಲ್ಲಿ ಕಾನೂನಿನ ಆಳ್ವಿಕೆಯೇ ಅತ್ಯುನ್ನತ. ಆದ್ದರಿಂದ ಯಾವುದೇ ಹೇಳಿಕೆ ಅಥವಾ ಕ್ರಮವು ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರದಂತೆ ಸರ್ಕಾರ ಎಚ್ಚರಿಕೆ ವಹಿಸಿ, ಈ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here