ಇ-ಆಟೋ ಚಾಲಕರಿಗೆ ಹೊಸ ನಿಯಮ ಜಾರಿ : ಪರ್ಮಿಟ್ ಇಲ್ಲದೆ ರಸ್ತೆಗಿಳಿಯುವಂತಿಲ್ಲ

0
80

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಆಟೋರಿಕ್ಷಾಗಳ (ಇ-ಆಟೋ) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಆಟೋ ಪರ್ಮಿಟ್ ಕಡ್ಡಾಯವಾಗಿದ್ದು, ಚಾಲನಾ ಪರವಾನಗಿ (DL) ಮತ್ತು ಪರ್ಮಿಟ್ ಹೊಂದಿರುವವರಿಗಷ್ಟೇ ಹೊಸ ಇ-ಆಟೋ ಖರೀದಿಸಲು ಅವಕಾಶ ನೀಡಲಾಗುತ್ತದೆ.

ಈವರೆಗೆ ಸಿಎನ್‌ಜಿ, ಎಲ್‌ಪಿಜಿ ಹಾಗೂ ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಕಡ್ಡಾಯವಾಗಿತ್ತು. ಆದರೆ, ಇ-ಆಟೋಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನು ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ ಈ ಹೊಸ ನಿಯಮ ಜಾರಿಗೆ ತಂದಿದೆ.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ಪರ್ಮಿಟ್ ಇಲ್ಲದ ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿದರೆ, ವಿಮಾ ಪರಿಹಾರ ಪಡೆಯಲು ತೊಂದರೆ ಉಂಟಾಗುತ್ತದೆ. ನಿಯಮಾನುಸಾರ ಪರ್ಮಿಟ್ ಇಲ್ಲದ ವಾಹನಗಳಿಗೆ ವಿಮಾ ಸೌಲಭ್ಯ ಅನ್ವಯಿಸದ ಕಾರಣ, ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಇ-ಆಟೋಗಳಿಗೆ ಉಚಿತ ಪರ್ಮಿಟ್

ಸಾಮಾನ್ಯ ಆಟೋಗಳಿಗೆ ಪರ್ಮಿಟ್ ಪಡೆಯಲು ₹500 ಶುಲ್ಕ ವಿಧಿಸಲಾಗುತ್ತದೆ. ಆದರೆ, ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅನ್ನು ಉಚಿತವಾಗಿ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ತಪ್ಪು ಮಾಹಿತಿ ನೀಡುತ್ತಿದ್ದ ಶೋರೂಮ್‌ಗಳಿಗೆ ಬ್ರೇಕ್

ಇತ್ತೀಚಿನ ವರ್ಷಗಳಲ್ಲಿ ಹಲವು ಇ-ಆಟೋ ಶೋರೂಮ್‌ಗಳು “ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅಗತ್ಯವಿಲ್ಲ” ಎಂದು ಚಾಲಕರಿಗೆ ತಪ್ಪು ಮಾಹಿತಿ ನೀಡಿ ಸಾವಿರಾರು ವಾಹನಗಳನ್ನು ಮಾರಾಟ ಮಾಡಿದ್ದವು. ಬೆಂಗಳೂರಿನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಸಿಎನ್‌ಜಿ ಹಾಗೂ ಎಲ್‌ಪಿಜಿ ಆಟೋಗಳು ಪರ್ಮಿಟ್ ಹೊಂದಿದ್ದರೂ, ಹೆಚ್ಚಿನ ಇ-ಆಟೋಗಳು ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದವು.

ಅಕ್ರಮಗಳಿಗೆ ಕಡಿವಾಣ

ಪರ್ಮಿಟ್ ಕಡ್ಡಾಯವಿಲ್ಲದ ಅವಕಾಶವನ್ನು ಬಳಸಿಕೊಂಡು ಕೆಲವು ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸಿ, ಹೊರರಾಜ್ಯದ ಚಾಲಕರನ್ನು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿದ್ದವು ಎಂಬ ಆರೋಪ ಕೇಳಿಬಂದಿತ್ತು. ಹೊಸ ನಿಯಮದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದ್ದು, ಸ್ಥಳೀಯ ಆಟೋ ಚಾಲಕರ ಹಿತಾಸಕ್ತಿ ಕಾಪಾಡಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here