ಕಾಸರಗೋಡು : ಕವಯತ್ರಿ, ಲೇಖಕಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಮತಿ ಪವಿತ್ರಾ ದಿನೇಶ್ ಕೊಕ್ಕಡ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ – ಶಿಕ್ಷಣ ರತ್ನ ಅಚೀವ್ಮೆಂಟ್ ಅವಾರ್ಡ್’ ಘೋಷಿಸಲಾಗಿದೆ.
ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ, ಕನ್ನಡ ಭವನ ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಡಾ. ಕೆ. ವಾಮನ್ ರಾವ್ ಬೇಕಲ್ ಸ್ಥಾಪಿತ ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಜುಲೈ 26, 2026ರಂದು (ಭಾನುವಾರ) ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿರುವ **”ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ”**ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಭಾಗವಹಿಸಲಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪವಿತ್ರಾ ದಿನೇಶ್ ಕೊಕ್ಕಡ ಅವರನ್ನು ಈ ಅಂತರ್ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಪ್ರಶಸ್ತಿ ಘೋಷಣೆಗೆ ಸಾಹಿತ್ಯ, ಶಿಕ್ಷಣ ಹಾಗೂ ಕನ್ನಡಾಭಿಮಾನಿ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

