ಸಿಬ್ಬಂದಿ ವರ್ತನೆಗೆ ಸಾರ್ವಜನಿಕರ ಅಸಮಾಧಾನ
ಹೆಬ್ರಿ : ಬಸ್ ನಿಲ್ದಾಣದ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯವು ಸ್ವಚ್ಛತೆ ಕೊರತೆ ಹಾಗೂ ಸಿಬ್ಬಂದಿಯ ದುರ್ವರ್ತನೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯರ ಆರೋಪದಂತೆ, ಶೌಚಾಲಯದ ಒಳಭಾಗದಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದ ಕಾರಣ ದುರ್ವಾಸನೆ ಆವರಿಸಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಶೌಚಾಲಯಕ್ಕೆ ತೆರಳುವ ಸಾರ್ವಜನಿಕರೊಂದಿಗೆ ಅಲ್ಲಿನ ಸಿಬ್ಬಂದಿ ಸೌಜನ್ಯದಿಂದ ವರ್ತಿಸದೆ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ, ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಹಾಗೂ ಚಿಕ್ಕ ಮಕ್ಕಳೊಂದಿಗೆ ಶೌಚಾಲಯಕ್ಕೆ ತೆರಳಿದಾಗಲೂ ಸಿಬ್ಬಂದಿ ಜಗಳಕ್ಕೆ ಮುಂದಾಗುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಸಾರ್ವಜನಿಕ ಶೌಚಾಲಯದ ಆವರಣದಲ್ಲೇ ಸಿಬ್ಬಂದಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ, ಸಂಬಂಧಪಟ್ಟ ಇಲಾಖೆ ತಕ್ಷಣ ಪರಿಶೀಲನೆ ನಡೆಸಿ, ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯವಿದ್ದಲ್ಲಿ ಅವರನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

