ವಿರಾಜ್ ಅಡೂರುಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026

0
12

ಕಾಸರಗೋಡು : ನಾಡಿನ ಸಾಹಿತಿ, ಅಂಕಣ ಬರಹ ಲೇಖಕ, ವ್ಯಂಗ್ಯಚಿತ್ರಗಾರ, ಶಿಬಿರ ಸಂಘಟಕ. ಶಿಬಿರ ಸಂಪನ್ಮೂಲ ವ್ಯಕ್ತಿ, ಪತ್ರಕರ್ತರಾದ ವಿರಾಜ್ ಅಡೂರು ಅವರಿಗೆ
ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ನೀಡುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ ಮಾಡಲಾಗುವುದು.

ಇದೇ ಜು.26ರಂದು ಕಾಸರಗೋಡಿನ ಕನ್ನಡ ಭವನದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಐ ಎ ಎಸ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಈ ಗೌರವ ಪ್ರದಾನ ನಡೆಯಲಿದೆ. ಕಾಸರಗೋಡಿನ ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸಹಕಾರದಲ್ಲಿ ಈ ಸಮ್ಮೇಳನ ನಡೆಯಲಿದೆ.

ವಿರಾಜ್ ಅಡೂರು ಅವರು ಚುಟುಕುಟುಕು (ಚುಟುಕು ಸಂಕಲನ), ಬಾನುಲಿಯಿತು (ಆಕಾಶವಾಣಿ ಪ್ರಸಾರಿತ ಕವನಗಳ ಸಂಕಲನ), ನಗಿಸುವ ಚಿತ್ರಗಳು (ವ್ಯಂಗ್ಯಚಿತ್ರ ಸಂಕಲನ), ಗಾದೆ ಗಮ್ಮತ್ತು(ಅಂಕಣ ಬರಹ ಸಂಕಲನ, ನಾಲ್ಕು ಸಂಪುಟಗಳಲ್ಲಿ), ಉಪನಯನ (ಧಾರ್ಮಿಕ ಸಂಕಲನ), ಶಿವಗಿರಿ (ಸಂಪಾದಿತ ಕೃತಿ), ಕಾಂತಾವರ ಕನ್ನಡ ಸಂಘದ, ‘ನಾಡಿಗೆ ನಮಸ್ಕಾರ’ ಪುಸ್ತಕ ಮಾಲಿಕೆಯಲ್ಲಿ ಮೂರು ಕೃತಿಗಳನ್ನು ಬರೆದಿದ್ದಾರೆ.

ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ಅತ್ಯುತ್ತಮ ಚಿತ್ರ ಕಲಾವಿದ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ಗಡಿನಾಡ ಚೈತನ್ಯ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ಪಾಶುಪತ ಸಾಹಿತ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ. ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ ಕುರಿತಾದ ಕವನ ರಚನಾ ಸ್ಪರ್ಧೆಯಲ್ಲಿ ಇವರು ರಚಿಸಿದ ‘ ಸನಾತನದ ಸಾಗರ ಕವನಕ್ಕೆ ಮೊದಲ ಬಹುಮಾನದ ಜತೆಗೆ ಚೈತನ್ಯಶ್ರೀ ಪುರಸ್ಕಾರ ದೊರೆತಿತ್ತು. ವಿರಾಜ್ ಅಡೂರು ರಚಿಸಿದ ಸುಮಾರು 2000 ವ್ಯಂಗ್ಯಚಿತ್ರಗಳು, 700ರಷ್ಟು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ಹಾಗೂ ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here