ಪಾರದರ್ಶಕ ಮತದಾರರ ಪಟ್ಟಿಗಾಗಿ ಸಾರ್ವಜನಿಕರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

0
28

ಉಡುಪಿ : ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮನೆ ಮನೆಗಳಿಗೆ ವಿತರಿಸಲಾಗಿರುವ ಎನ್ಯೂಮರೇಶನ್‌ (ಗಣತಿ) ನಮೂನೆಗಳನ್ನು ಸಾರ್ವಜನಿಕರು ತ್ವರಿತವಾಗಿ ಭರ್ತಿ ಮಾಡಿ ಸಂಬಂಧಿತ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜುಲೈ 14ರವರೆಗೆ ಜಿಲ್ಲೆಯ 10,63,876 ಮತದಾರರಲ್ಲಿ 10,63,451 ಮಂದಿಗೆ ಎನ್ಯೂಮರೇಶನ್‌ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ.99.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಈವರೆಗೆ 3,22,027 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಶೇ.30.27ರಷ್ಟು ಪ್ರಗತಿ ದಾಖಲಾಗಿದೆ. ಮನೆ ಮನೆ ಭೇಟಿ ವೇಳೆ 1,647 ಮತದಾರರು ಮೃತಪಟ್ಟಿರುವುದು, 1,166 ಮತದಾರರು ಖಾಯಂವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಹಾಗೂ 396 ಮತದಾರರು ತಮ್ಮ ದಾಖಲೆಗಳನ್ನು ಸ್ವಯಂ ಸಲ್ಲಿಸಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಬೈಂದೂರು, ಕುಂದಾಪುರ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100ರಷ್ಟು ಎನ್ಯೂಮರೇಶನ್‌ ಫಾರ್ಮ್‌ಗಳ ವಿತರಣೆ ಪೂರ್ಣಗೊಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ 425 ಫಾರ್ಮ್‌ಗಳ ವಿತರಣೆ ಬಾಕಿ ಇದ್ದು, ಅದನ್ನು ಶೀಘ್ರ ಪೂರ್ಣಗೊಳಿಸುವ ಜವಾಬ್ದಾರಿ ಬಿಎಲ್‌ಒ ಹಾಗೂ ಬಿಎಲ್‌ಎಗಳ ಮೇಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪಾರದರ್ಶಕ, ನಿಖರ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ರಾಜಕೀಯ ಪಕ್ಷಗಳು, ಬಿಎಲ್‌ಒಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ್, ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.