‘ಟಾಕ್ಸಿಕ್’ ಅಬ್ಬರಕ್ಕೆ ಹಿಂದೇಟು ; ನಾನಿ ‘ಪ್ಯಾರಡೈಸ್’ ಸಿನಿಮಾ ಬಿಡುಗಡೆ ಮುಂದೂಡಿಕೆ!

0
12

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದ್ದು, ಇದೇ ವೇಳೆ ತೆಲುಗಿನ ನಟ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್ ಹಾಗೂ ಇತರೆ ಪ್ರಚಾರ ಸಾಮಗ್ರಿಗಳು ಭಾರಿ ಗಮನ ಸೆಳೆದಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಇದಕ್ಕೂ ಮೊದಲು ಆಗಸ್ಟ್ 21ರಂದು ಬಿಡುಗಡೆಯಾಗಬೇಕಿದ್ದ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ಬಿಡುಗಡೆ ಇದೀಗ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಮಾರ್ಚ್ ತಿಂಗಳಲ್ಲೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಚಿತ್ರೀಕರಣ ಪೂರ್ಣಗೊಳ್ಳದ ಕಾರಣ ಮೊದಲೇ ಮುಂದೂಡಲ್ಪಟ್ಟಿತ್ತು.

ಚಿತ್ರರಂಗದಲ್ಲಿ ‘ಟಾಕ್ಸಿಕ್’ ಸಿನಿಮಾದ ಭಾರೀ ಕ್ರೇಜ್ ಮತ್ತು ಬಾಕ್ಸ್ ಆಫೀಸ್ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ‘ದಿ ಪ್ಯಾರಡೈಸ್’ ಚಿತ್ರದ ಬಿಡುಗಡೆಯನ್ನು ಒಂದು ತಿಂಗಳು ಮುಂದೂಡಿರುವುದು ಜಾಣತನದ ನಿರ್ಧಾರ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜೊತೆಗೆ ಯಶ್ ಸಹ ನಿರ್ಮಾಪಕರಾಗಿದ್ದಾರೆ.