
ಪುತ್ತೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿಯಂತೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮನೆ-ಮನೆ ಭೇಟಿ ಕಾರ್ಯ ಆಗಸ್ಟ್ 8ರವರೆಗೆ ಮುಂದುವರಿಯಲಿದ್ದು, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 17ರಂದು ಪ್ರಕಟಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 19ರಂದು ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದೆ.
ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯಂತೆ ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳ ಮನೆ-ಮನೆ ಭೇಟಿ ಕಾರ್ಯ ನಡೆಯಬೇಕಾಗಿತ್ತು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು-ದಾವೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಯೋಜನೆ ಇತ್ತು.
ಆದರೆ ಚುನಾವಣಾ ಆಯೋಗವು ಜುಲೈ 15ರಂದು ಹೊರಡಿಸಿದ ಪರಿಷ್ಕೃತ ಆದೇಶದಂತೆ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತಿದೆ.
ಹೊಸ ವೇಳಾಪಟ್ಟಿಯಂತೆ ಜೂನ್ 30ರಿಂದ ಆರಂಭಗೊಂಡಿರುವ ಬಿಎಲ್‌ಒಗಳ ಮನೆ-ಮನೆ ಭೇಟಿ ಕಾರ್ಯ ಆಗಸ್ಟ್ 8ರವರೆಗೆ ಮುಂದುವರಿಯಲಿದ್ದು, ಇದೇ ಅವಧಿಯಲ್ಲಿ ಮತಗಟ್ಟೆಗಳ ಮರುಜೋಡಣೆ ಹಾಗೂ ಮರುಹಂಚಿಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುತ್ತದೆ.
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಮತದಾರರು ತಮ್ಮ ಹಕ್ಕು-ದಾವೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 15ರವರೆಗೆ ನಡೆಯಲಿದ್ದು, ನಂತರ ಅಕ್ಟೋಬರ್ 19ರಂದು ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಇಲಾಖೆ, ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳು ಇದ್ದಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದೆ.
