ಲಾವಣ್ಯ ಹತ್ಯೆ ಪ್ರಕರಣ – ಅರೋಪಿ ಚೇತನ್‌ ವಿರುದ್ಧ ಬೆಚ್ಚಿಬೀಳಿಸುವ ಮಾಹಿತಿ

0
103

ಬಂಟ್ವಾಳ : ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಚೇತನ್ ವಿರುದ್ಧ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ಓಡಿಲಾಳ–ರೇಷ್ಮೆ ರೋಡ್ ಕರ್ಣಂತೋಡು ನಿವಾಸಿಯಾಗಿರುವ ಚೇತನ್ ಕಳೆದ ಮೂರು ವರ್ಷಗಳಿಂದ ಲಾವಣ್ಯಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದು, ತನ್ನನ್ನೇ ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಲಾವಣ್ಯ ಈ ಪ್ರಸ್ತಾಪವನ್ನು ನಿರಾಕರಿಸಿದ್ದಳು. ಆದರೂ ಚೇತನ್ ಪ್ರತಿದಿನ ಮೊಬೈಲ್ ಸಂದೇಶಗಳ ಮೂಲಕ ಆಕೆಗೆ ಕಿರುಕುಳ ನೀಡಿ, ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಹತ್ಯೆಗೆ ಮುನ್ನವೇ ಬೆದರಿಕೆ ಸಂದೇಶ

ಘಟನೆಯ ದಿನವೂ ಚೇತನ್ ಲಾವಣ್ಯಳಿಗೆ ಸಂದೇಶ ಕಳುಹಿಸಿ, ತಾನು ಕಾರಿನಲ್ಲಿ ಕಲ್ಲಡ್ಕಕ್ಕೆ ಬರುತ್ತಿರುವುದಾಗಿ ತಿಳಿಸಿ, ತನ್ನೊಂದಿಗೆ ಬರಬೇಕು ಎಂದು ಒತ್ತಾಯಿಸಿದ್ದ. “ಬರದಿದ್ದರೆ ಕೊಂದು ಬಿಡುತ್ತೇನೆ” ಎಂಬ ಎಚ್ಚರಿಕೆಯ ಸಂದೇಶವನ್ನೂ ಕಳುಹಿಸಿದ್ದಾನೆ ಎನ್ನಲಾಗಿದೆ. ಆದರೆ ಲಾವಣ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಸಂಜೆ ವೇಳೆಗೆ ಕಲ್ಲಡ್ಕದಲ್ಲಿರುವ ಮೆಡಿಕಲ್ ಅಂಗಡಿಯ ಬಳಿ ಕಾರಿನಲ್ಲಿ ಕಾದು ನಿಂತಿದ್ದ ಚೇತನನ್ನು ಗಮನಿಸಿದ ಲಾವಣ್ಯ, ಈ ವಿಷಯವನ್ನು ತನ್ನ ಸ್ನೇಹಿತೆಗೆ ತಿಳಿಸಿದ್ದಳು. ಆದರೆ ಬಳಿಕ ನಡೆದ ಘಟನೆ ದುರಂತದಲ್ಲಿ ಅಂತ್ಯಗೊಂಡಿದೆ.

ಈ ಹಿಂದೆಯೇ ಹಲ್ಲೆಗೆ ಯತ್ನ

ಚೇತನ್ ಈ ಹಿಂದೆಯೂ ಲಾವಣ್ಯ ಕೆಲಸ ಮಾಡುತ್ತಿದ್ದ ಕಲ್ಲಡ್ಕದ ಪುಷ್ಪರಾಜ್ ಮೆಡಿಕಲ್ ಅಂಗಡಿಗೆ ನುಗ್ಗಿ, “ಇಲ್ಲಿ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದರೂ ಮತ್ತೆ ಯಾಕೆ ಬಂದೆ?” ಎಂದು ಗಲಾಟೆ ನಡೆಸಿ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ. ಸಿಬ್ಬಂದಿ ತಡೆಯಲು ಮುಂದಾದಾಗ ಆತ ಅಲ್ಲಿದ್ದ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದ. ವೈದ್ಯರು ಪೊಲೀಸರಿಗೆ ಕರೆ ಮಾಡಿದಾಗ, “ಪೊಲೀಸರು ಬಂದರೆ ಬರಲಿ, ನಾನು ನೋಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದನೆಂದು ತಿಳಿದುಬಂದಿದೆ.

ಬೆಂಗಳೂರುಗೆ ಕೆಲಸಕ್ಕೆ ಹೋಗಿದ್ದೇನೆ ಎಂದಿದ್ದ ಆರೋಪಿ

ಚೇತನ್ ಇತ್ತೀಚೆಗಷ್ಟೇ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮುಗಿಸಿ, ಕೇವಲ ಮೂರು ದಿನಗಳ ಹಿಂದಷ್ಟೇ “ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದೇನೆ” ಎಂದು ಪೋಷಕರಿಗೆ ತಿಳಿಸಿ ಮನೆ ಬಿಟ್ಟಿದ್ದ. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ.

ಕೊಲೆ ಬಳಿಕ ಪೋಷಕರಿಗೇ ಕರೆ

ಯುವತಿಯನ್ನು ಹತ್ಯೆಗೈದ ಬಳಿಕ ಪರಾರಿಯಾಗುತ್ತಿದ್ದ ಚೇತನ್, ಮೃತ ಲಾವಣ್ಯಳ ಪೋಷಕರಿಗೆ ಕರೆ ಮಾಡಿ, “ನಿಮ್ಮ ಮಗಳನ್ನು ನಾನು ಕೊಂದಿದ್ದೇನೆ. ನನ್ನ ಹೆಣ ನಾಳೆ ಸಿಗುತ್ತದೆ” ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.