ಉಡುಪಿ: ಜಿಲ್ಲೆಯ ಕಾಪು, ಉಡುಪಿ, ಮಣಿಪಾಲ ಹಾಗೂ ಕಾರ್ಕಳ ಪರಿಸರದಲ್ಲಿ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬುಡ್ನಾರ್ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಎಂ.ಡಿ.ಎಂ.ಎ ಪೌಡರ್, ಹೈಡ್ರೋಗಾಂಜಾ, ಮಾದಕ ಮಾತ್ರೆಗಳು ಹಾಗೂ ಕಾರು ಸೇರಿದಂತೆ ಒಟ್ಟು 3,31,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉದ್ಯಾವರ ಪಿತ್ರೋಡಿಯ ವಿಜಯ ಪೂಜಾರಿ (36), ಕಾರ್ಕಳ ಕುಕ್ಕಂದೂರಿನ ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಮತ್ತು ಕಾರ್ಕಳ ಮಿಯಾರಿನ ಆಕಾಶ್ ಶೆಟ್ಟಿ (20) ಬಂಧಿತ ಆರೋಪಿಗಳಾಗಿದ್ದಾರೆ. ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬುಡ್ನಾರ್ನ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಮಾದಕ ವಸ್ತುಗಳನ್ನು ಹೊಂದಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 4 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ತೂಕದ ಎಂ.ಡಿ.ಎಂ.ಎ ಟ್ಯಾಬ್ಲೆಟ್ ಹಾಗೂ 3 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಡ್ರಗ್ಸ್ ಸಾಗಾಟಕ್ಕೆ ಬಳಸುತ್ತಿದ್ದ ಒಂದು ಕಾರು ಹಾಗೂ ಇತರೆ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

