NATGRID ದುರ್ಬಳಕೆ ಆರೋಪ: ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಹಾಗೂ ಎಸಿಪಿ ಶ್ರೀಕಾಂತ್ ವಿರುದ್ಧ ಕೆಎಸ್‌ಹೆಚ್‌ಆರ್‌ಸಿ ತನಿಖೆಗೆ ಆದೇಶ

0
11

​ಮಂಗಳೂರು:ಪೊಲೀಸ್ ಅಧಿಕಾರಿಗಳು ನಾಗರಿಕರ ವೈಯಕ್ತಿಕ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾರೆ ಎನ್ನಲಾದ ಗಂಭೀರ ದೂರಿಗೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು (KSHRC) ತನಿಖೆಗೆ ಆದೇಶಿಸಿದೆ. ಅಮಾನತಿನಲ್ಲಿರುವ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಮಂಗಳೂರು ಉತ್ತರ (ಪಣಂಬೂರು) ವಿಭಾಗದ ಎಸಿಪಿ ಶ್ರೀಕಾಂತ್ ಅವರ ವಿರುದ್ಧ ಉನ್ನತಾಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ (ಪ್ರಕರಣ ಸಂಖ್ಯೆ: 3141/10/21/2026).

​ಪ್ರಕರಣದ ವಿವರ:

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚೋಲ್ಯಾಡಿ ರಸ್ತೆ ನಿವಾಸಿ ಶ್ರೀಮತಿ ಸುಮುತಿ ನಾಯ್ಕ್ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರುದಾರರ ಗಮನಕ್ಕೆ ತರದೆ, ಅವರ ಆಧಾರ್ ಸಂಖ್ಯೆ, ಮೊಬೈಲ್ ವಿವರಗಳು ಹಾಗೂ ಪಾಸ್‌ಪೋರ್ಟ್ ಸೇರಿದಂತೆ ಅತ್ಯಂತ ಗೌಪ್ಯ ವೈಯಕ್ತಿಕ ದತ್ತಾಂಶಗಳನ್ನು ‘ನ್ಯಾಟ್‌ಗ್ರಿಡ್’ (NATGRID) ವ್ಯವಸ್ಥೆಯ ಮೂಲಕ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

​ಆಯೋಗದ ಆದೇಶ:

ಈ ದೂರನ್ನು ಪರಿಶೀಲಿಸಿದ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು, ತನಿಖೆಗೆ ಆದೇಶಿಸಿ ಅಧಿಕೃತ ನಿರ್ದೇಶನ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಯ ಮೂಲಕ ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ಟೋಬರ್ 06, 2026 ರೊಳಗಾಗಿ ಆಯೋಗಕ್ಕೆ ವರದಿ ಸಲ್ಲಿಸಬೇಕಾಗಿದೆ.

​ಈ ಪ್ರಕರಣದ ಮುಂದಿನ ನಡವಳಿಕೆ ಮತ್ತು ವರದಿ ಪರಿಶೀಲನೆಯನ್ನು ಅಕ್ಟೋಬರ್ 07, 2026 ರಂದು ಆಯೋಗದ ಮುಂದೆ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ.