ವ್ಯಕ್ತಿತ್ವ, ಸೇವಾ ಮನೋಭಾವ, ಕಠಿಣ ಪರಿಶ್ರಮದಿಂದ ಬೆಂಕಿಯಲ್ಲಿ ಅರಳಿದ ಹೂವಾದ ಮಲ್ಲಿಕಾರ್ಜುನ ಖರ್ಗೆ

0
7

ಭಾರತೀಯ ರಾಜಕೀಯದಲ್ಲಿ ಸರಳತೆ, ಹೋರಾಟ ಮತ್ತು ಸಾಮಾಜಿಕ ನ್ಯಾಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಒಂದು ಸ್ಫೂರ್ತಿದಾಯಕ ಪಯಣ. ಬಾಲ್ಯದಲ್ಲಿ ಎದುರಿಸಿದ ಕಷ್ಟಗಳು, ಸಾಮಾಜಿಕ ಅಸಮಾನತೆ, ಆರ್ಥಿಕ ಸಮಸ್ಯೆಗಳು ಹಾಗೂ ರಾಜಕೀಯ ಸವಾಲುಗಳ ನಡುವೆಯೂ ಅವರು ತಮ್ಮ ಧೈರ್ಯ, ಪರಿಶ್ರಮ ಮತ್ತು ಬದ್ಧತೆಯಿಂದ ದೇಶದ ಅತ್ಯುನ್ನತ ರಾಜಕೀಯ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ವರವಟ್ಟಿ ಎಂಬ ಕುಗ್ರಾಮದ ಭೂ ರಹಿತ ಕೃಷಿ ಕೂಲಿ ಕರ್ಮಿಕ ಮಾಪಣ್ಣನ ಮನೆಯಲ್ಲಿ ಖರ್ಗೆ ಹುಟ್ಟಿದರು. ಒಂದು ಅಂಕಣದ ತೆಂಗಿನ ಸೂರಿನ ಆ ಮನೆ ಈಗಲೂ ಅಲ್ಲಿದೆ. ತನ್ನ ಮೊದಲ ಹೆಂಡತಿ ಸಾಬವ್ವ ಹಾಗೂ ಇಬ್ಬರು ಮಕ್ಕಳನ್ನು ದಂಗೆಯೊಂದರಲ್ಲಿ ಕಳೆದುಕೊಂಡ ಮಾಪಣ್ಣ ಅವರು ಪುಟ್ಟ ಕೂಸಾಗಿದ್ದ ಮಲ್ಲಿಕಾರ್ಜುನ ಖರ್ಗೆನ್ನು ಎತ್ತಿಕೊಂಡು ಗುಲ್ಬರ್ಗಕ್ಕೆ ಓಡಿ ಹೋದರು. ಅಲ್ಲಿನ ಎಂ ಎಸ್ ಕೆ ಮಿಲ್ ನಲ್ಲಿ ಕೂಲಿ ಕೆಲಸ ಮಾಡಿ ಮಗನನ್ನು ವಕೀಲನನ್ನಾಗಿ ರೂಪಿಸಿದರು. ಖರ್ಗೆ ಅವರ ಬಾಲ್ಯ ದುಃಖ ಮತ್ತು ಸಂಕಷ್ಟಗಳಿಂದ ಕೂಡಿತ್ತು. ಅವರ ಬದುಕಿನ ಅತ್ಯಂತ ನೋವಿನ ಅಧ್ಯಾಯವಾಗಿದೆ. ತಮ್ಮ ಕುಟುಂಬದಲ್ಲಿ ಆದ ಈ ದುರಂತ ಅವರ ಮನಸ್ಸಿನಲ್ಲಿ ಅಳಿಸಲಾಗದ ಗಾಯವನ್ನು ಮೂಡಿಸಿದರೂ, ಅದೇ ಅವರನ್ನು ದೃಢ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸಿತು.
ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಬೆಳೆದ ಅವರು ವಕೀಲರಾಗಿ ತಮ್ಮ ವೃತ್ತಿಜೀವನ ಆರಂಭಿಸಿ ಸಮಾಜದ ಬಡವರು, ಕಾರ್ಮಿಕರು ಮತ್ತು ಶೋಷಿತರ ಪರವಾಗಿ ಧ್ವನಿಯಾದರು. ಈ ಸೇವಾ ಮನೋಭಾವವೇ ಅವರನ್ನು ರಾಜಕೀಯಕ್ಕೆ ಕರೆತಂದಿತು. ಕಾರ್ಮಿಕ ನಾಯಕರಾಗಿ, ಅಂಬೇಡ್ಕರ್ ವಾದಿಯಾಗಿ, ಬುದ್ಧನ ಧಮ್ಮ ದಲ್ಲಿ ನಂಬಿಕೆ ಇಟ್ಟುಕೊಂಡಿರುವ ಖರ್ಗೆ ಅಂಬೇಡ್ಕರ್ ಅವರ ಆರ್ ಪಿ ಐ ಪಕ್ಷದಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆದ್ದು 1972ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಖರ್ಗೆ ಅವರು ವಿಧಾನಸಭೆಯಲ್ಲಿ ಸತತ ಗೆಲುವು ಸಾಧಿಸಿ ಸೋಲಿಲ್ಲದ ಸರದಾರರಾಗಿ ಹೊರ ಹೊಮ್ಮಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಜನಪರ ನಿಲುವಿನಿಂದ ಅವರು ಜನರ ವಿಶ್ವಾಸ ಗಳಿಸಿದರು. ನಂತರ ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿಸಿ ರೈಲ್ವೆ, ಕಾರ್ಮಿಕ ಮತ್ತು ಉದ್ಯೋಗ ಸೇರಿ ಹಲವು ಪ್ರಮುಖ ಇಲಾಖೆಗಳ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
2022ರಲ್ಲಿ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರು. ಇದು ಪಕ್ಷದ ಇತಿಹಾಸದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ. ದೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಎಲ್ಲ ನಾಯುಕರು, ವರ್ಗಗಳೊಂದಿಗೆ ಬೆರೆಯುವ ಗುಣದಿಂದ ಅವರು ರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತ ನಾಯಕರಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಯುವಜನತೆಗೆ ಸ್ಪೂರ್ತಿಯ ಸಂದೇಶ ನೀಡುತ್ತದೆ. ಜನ್ಮ, ಬಡತನ ಅಥವಾ ಪರಿಸ್ಥಿತಿಗಳು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ; ಬದಲಿಗೆ ಪರಿಶ್ರಮ, ಶಿಕ್ಷಣ, ಆತ್ಮವಿಶ್ವಾಸ ಮತ್ತು ಸಮಾಜಸೇವೆಯ ಮನೋಭಾವವೇ ಯಶಸ್ಸಿನ ನಿಜವಾದ ಆಧಾರ ಎಂಬುದನ್ನು ಅವರ ಬದುಕು ಸಾರುತ್ತದೆ. ಸಂಕಷ್ಟಗಳು ಅವರನ್ನು ಕುಗ್ಗಿಸಲಿಲ್ಲ; ಬದಲಿಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲುವಂತೆ ಮಾಡಿತು.
1999 ರಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಖರ್ಗೆ ಅವರನ್ನು ಕೈ ಬಿಟ್ಟು ಎಸ್ ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಪ್ರತಿಕ್ರಿಯೆ ನೀಡಿದ ಖರ್ಗೆ “ನನಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಏನೂ ಬೇಸರ ಇಲ್ಲ. ಸೂಕ್ತ ಸಮಯಕ್ಕೆ ಮುನ್ನ, ಹಣೆಬರಹಕ್ಕೂ ಹೆಚ್ಚು ಏನೂ ಸಿಗಲಾರದು’’ ಎಂದು ಪ್ರತಿಕ್ರಯಿಸಿದರು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲೂ ಮುಖ್ಯಮಂತ್ರಿಯಾಗುವ ಅವಾಕಾಶವಿತ್ತು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಖರ್ಗೆ ಅವರ ಆತ್ಮೀಯ ಒಡನಾಡಿ ಧರಂ ಸಿಂಗ್ ಅವರಿಗೆ ರಾಜ್ಯದ ಚುಕ್ಕಾಣಿ ಹಿಡಿಯುವ ಸುಯೋಗ ದೊರೆಯಿತು. ಆಗಲೂ ಖರ್ಗೆ ಬೇಸರಿಸಿಕೊಳ್ಳಲಿಲ್ಲ. ಕಾಂಗ್ರೆಸ್ ನಲ್ಲಿ ಬಂಡಾಯ, ಭಿನ್ನಮತೀಯ ಚಟುವಟಿಕೆಗಳಲ್ಲಿ ಎಂದೂ ಭಾಗಿಯಾದ ಅಪ್ಪಟ ಕಾಂಗ್ರೆಸ್ ಸೇನಾನಿ ಮಲ್ಲಿಕಾರ್ಜನ ಖರ್ಗೆ.

ಖರ್ಗೆ ಅವರು ತಮ್ಮ ಅಧಿಕಾರದುದ್ದಕ್ಕೂ ಹೈದ್ರಾಬಾದ್ ಕರ್ನಾಟಕ ಹಾಗೂ ಗುಲ್ಬರ್ಗದ ಬೆಳವಣಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಸಂವಿಧಾನದ 371 – ಜೆ ಅಡಿ ದೊರೆತ ವಿಶೇಷ ಸ್ಥಾನಮಾನ ದೊರಕಿಸಿಕೊಡಲು ಶ್ರಮಿಸಿದ ಖರ್ಗೆ ಅವರಿಂದಾಗಿ ಇಲ್ಲಿನ ಜನರ ಬದುಕು ಬದಲಾಗಿದೆ. ಪಶು ವೈದ್ಯ ವಿವಿ, ಹೈ ಕೋರ್ಟ್ ಪೀಠ, ಇಎಸ್ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು, ರಾಜ್ಯ ಸರಕಾರದ ವೈದ್ಯ ಕಾಲೇಜು, ಜಯದೇವ ಆಸ್ಪತ್ರೆ, ಕೇಂದ್ರ ಸರಕಾರದ ಕೆಲವು ಕಚೇರಿಗಳು, ರೈಲ್ವೆ ಸೌಲಭ್ಯ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅಗಾಧ ಸಾಧನೆಗಳನ್ನು ಅವರು ಹೊತ್ತು ನಡೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, ರಾಜ್ಯಸಭೆಯಲ್ಲಿ ಎರಡನೇ ಬಾರಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ರಾಜಕಾರಣಿ. ಆರು ದಶಕಗಳ ರಾಜ್ಯ ರಾಜಕಾರಣ. ಹೆಚ್ಚುಕಡಿಮೆ ಎರಡು ದಶಕಗಳ ಕಾಲ ರಾಷ್ಟ್ರ ರಾಜಕಾರಣಕ್ಕೆ ಕೊಡುಗೆ ನೀಡಿದ್ದಾರೆ. 8 ದಶಕಗಳಲ್ಲಿ ಖರ್ಗೆ ಒಮ್ಮೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಉಳಿದಂತೆ ಸೋಲದ, ದಣಿವರೆಯದ ರಾಜಕಾರಣಿ ಎಂಬುದು ವಿಶೇಷ.
ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ರಾಜಕಾರಣಿಯಲ್ಲ, ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತ ಹೋರಾಟಗಾರ. ಅನೇಕ ಕಷ್ಟ-ನೋವುಗಳ ಬೆಂಕಿಯಲ್ಲಿ ನೊಂದು, ಬೆಂದು, ತನ್ನನ್ನೇ ಸುಟ್ಟುಕೊಂಡು ತನ್ನ ವ್ಯಕ್ತಿತ್ವ ಮತ್ತು ಸೇವಾ ಮನೋಭಾವದಿಂದ ಬೆಂಕಿಯಲ್ಲಿ ಅರಳಿದ ಹೂವಿನಂತೆ ಅವರು ಭಾರತೀಯ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಅವರ ಜೀವನಯಾನ ಅತ್ಯಂತ ಅರ್ಥಪೂರ್ಣವಾಗಿದೆ.