ವಿಶ್ವ ತುಳುವೆರ್ (ರಿ) ನೂತನ ಪದಾಧಿಕಾರಿಗಳ ಆಯ್ಕೆ

0
49

ಕಾಸರಗೋಡು/ಮಂಗಳೂರು: ವಿಶ್ವ ತುಳುವೆರ್ (ರಿ) ಸಂಘಟನೆಯ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಪ್ರಕಾಶ್ ಸಿಂಫೋನಿ ಹಾಗೂ ಪ್ರಚಾರ ನಿರ್ವಹಕ ಅಧ್ಯಕ್ಷರಾಗಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಆಯ್ಕೆಯಾಗಿದ್ದಾರೆ.

ಡಾ. ವಾಣಿಶ್ರೀ ಕಾಸರಗೋಡು ಅವರು ಪಾರ್ಪಜೆ ಈಶ್ವರ ಭಟ್ ಹಾಗೂ ದೇವಕಿ ದಂಪತಿಯ ಪುತ್ರಿಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರೌಢಶಿಕ್ಷಣವನ್ನು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ, ಪಿಯುಸಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಆಯುರ್ವೇದ ವೈದ್ಯಕೀಯ ಪದವಿಯನ್ನು ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಾಲ್ಯದಲ್ಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅವರು, ಪ್ರಸ್ತುತ ಪತಿ ಡಾ. ವೆಂಕಟಗಿರೀಶ್ ಅವರೊಂದಿಗೆ ಕಾಸರಗೋಡಿನ ನೆಲ್ಲಿಕಟ್ಟೆಯಲ್ಲಿ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಾ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಸಿಂಫೋನಿ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಇವರು ಹಲವಾರು ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುದಲ್ಲದೇ, ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ, ಮತ್ತು ಕರಾವಳಿ ಕರ್ನಾಟಕ ನೃತ್ಯ ಕಲಾವಿದರ ಸಂಘ , ಇದರ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿರುವವರು.

ಪ್ರಚಾರ ನಿರ್ವಹಕ ಅಧ್ಯಕ್ಷರಾಗಿ ಆಯ್ಕೆಯಾದ ಕೀರ್ತಿ ಕಾರ್ಕಳ ಅವರು ತುಳುನಾಡ ತುಡರ್ ಖ್ಯಾತಿಯವರಾಗಿದ್ದು, ತುಳು ಹಾಗೂ ಕನ್ನಡ ಕಿರುತೆರೆ ನಟನಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಮಾಜಸೇವಕ ಹಾಗೂ ತುಳು ಭಾಷೆ-ಸಂಸ್ಕೃತಿಯ ಉಳಿವಿಗಾಗಿ ಹಲವು ಸಂಘಟನೆಗಳ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳುನಾಡು ಟ್ರಸ್ಟ್‌ನ ರಾಜ್ಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿರುವ ಅವರು, ಸಮಾಜಮುಖಿ ಕಾರ್ಯಗಳಿಂದ ಜನಮೆಚ್ಚುಗೆ ಗಳಿಸಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಂಘಟನೆಯ ಸದಸ್ಯರು ಹಾಗೂ ತುಳು ಅಭಿಮಾನಿಗಳು ಸ್ವಾಗತಿಸಿದ್ದು, ಇವರ ನೇತೃತ್ವದಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ತುಳುನಾಡಿನ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.