ಟಕೆಡಾ ಸಂಸ್ಥೆಯ ಕ್ಯುಡೆಂಗಾ ಡೆಂಗ್ಯೂ ಲಸಿಕೆಗೆ ಡಿಸಿಜಿಐ ಅನುಮೋದನೆ: ಭಾರತದಲ್ಲಿ ಅನುಮೋದನೆ ಪಡೆದ ಪ್ರಥಮ ಡೆಂಗ್ಯೂ ಲಸಿಕೆ

0
13

ಮಂಗಳೂರು: ಟಕೆಡಾ ಬಯೋಫಾರ್ಮಾಸ್ಯೂಟಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದಿಲ್ಲಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಡೆಂಗ್ಯೂ ತಡೆಗಟ್ಟಲು ತನ್ನ ಕ್ಯುಡೆಂಗಾ ಲಸಿಕೆಗೆ ಮಾರುಕಟ್ಟೆ ಅನುಮತಿಯನ್ನು (ಸಿಟಿ-20, ಹೊಸ ಔಷಧಗಳು ಮತ್ತು ಕ್ಲಿನಿಕಲ್ ಟ್ರಯಲ್ಸ್ ನಿಯಮಗಳು, 2019) ನೀಡಿದೆ ಎಂದು ಘೋಷಿಸಿದೆ. ಕ್ಯುಡೆಂಗಾ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆಯಾಗಿದ್ದು, ಲಸಿಕೆ ನೀಡುವ ಮುನ್ನ ಯಾವುದೇ ರಕ್ತ ಪರೀಕ್ಷೆಯ ಅಗತ್ಯವಿಲ್ಲದೆ, ಹಿಂದೆ ಡೆಂಗ್ಯೂ ಪೀಡಿತರಾಗಿದ್ದ ಅಥವಾ ಆಗದಿರುವ ವ್ಯಕ್ತಿಗಳಲ್ಲಿ ಇದನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿರುವ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳಿಗೆ ಈ ಅನುಮೋದನೆ ಪ್ರಮುಖ ಮೈಲಿಗಲ್ಲಾಗಿದೆ.

ಡೆಂಗ್ಯೂ ಸೊಳ್ಳೆಗಳಿಂದ ಹರಡುವ ವೈರಲ್ ಕಾಯಿಲೆಯಾಗಿದ್ದು, 125ಕ್ಕೂ ಹೆಚ್ಚು ದೇಶಗಳಲ್ಲಿ ಹರಡುವ ಮೂಲಕ ಜಾಗತಿಕ ಆರೋಗ್ಯಕ್ಕೆ ಭಾರಿ ಬೆದರಿಕೆಯೊಡ್ಡಿದೆ. ಜಾಗತಿಕ ಡೆಂಗ್ಯೂ ಹೊರೆಯ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಭಾರತದಲ್ಲೇ ಕಂಡುಬರುತ್ತವೆ. 2025 ರಲ್ಲಿ, ವರದಿಯಾದ ಪ್ರಕರಣಗಳ ಸಂಖ್ಯೆ 1,13,000 ದಾಟಿತ್ತು. ಆದರೆ ಅಧ್ಯಯನ ಮತ್ತು ವಿಶ್ಲೇಷಣೆಗಳ ಪ್ರಕಾರ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳ ನೈಜ ಸಂಖ್ಯೆ ವರದಿಯಾದುದಕ್ಕಿಂತ ಹೆಚ್ಚಿದ್ದು, ಪ್ರತಿ ವರ್ಷ ಕೋಟ್ಯಂತರ ಜನರು ಈ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಇಂಟರ್‌ ಕಾಂಟಿನೆಂಟಲ್ ಮಾರ್ಕೆಟ್ಸ್ ಮುಖ್ಯಸ್ಥ ಡಾ. ಮಹೇಂದರ್ ನಾಯಕ್ ಮಾತನಾಡಿ, “ಡೆಂಗ್ಯೂ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಬೆಳೆಯುತ್ತಿದೆ. ಭಾರತಕ್ಕೆ ವೈಜ್ಞಾನಿಕ ಪುರಾವೆ ಆಧಾರಿತ ನಿರಂತರ ತಡೆಗೋಡೆಯ ಅಗತ್ಯವಿದೆ. ಕ್ಯುಡೆಂಗಾದ ಇತ್ತೀಚಿನ ಏಳು ವರ್ಷಗಳ ಅಧ್ಯಯನ ದತ್ತಾಂಶವು, ಡೆಂಗ್ಯೂ ವೈರಸ್‌ ನ ನಾಲ್ಕೂ ತಳಿಗಳ ವಿರುದ್ಧ ಈ ಲಸಿಕೆಯು ಆಸ್ಪತ್ರೆ ದಾಖಲಾತಿ ಮತ್ತು ಸೋಂಕಿನಿಂದ ನಿರಂತರ ರಕ್ಷಣೆ ನೀಡುವುದನ್ನು ತೋರಿಸಿದೆ. 2022 ರಲ್ಲಿ ಬಿಡುಗಡೆಯಾದಂದಿನಿಂದ ಕ್ಯುಡೆಂಗಾಗೆ 43 ದೇಶಗಳಲ್ಲಿ ಅನುಮೋದನೆ ಸಿಕ್ಕಿದ್ದು, ಜಾಗತಿಕವಾಗಿ 3.2 ಕೋಟಿಗೂ ಹೆಚ್ಚು ಡೋಸ್‌ ಗಳನ್ನು ವಿತರಿಸಲಾಗಿದೆ. ಈ ಅನುಮೋದನೆಯು ಭಾರತದಲ್ಲಿ ಡೆಂಗ್ಯೂ ತಡೆಗಟ್ಟುವಿಕೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಟಕೆಡಾದ 245 ವರ್ಷಗಳ ಪರಂಪರೆ ಮತ್ತು 70ಕ್ಕೂ ಹೆಚ್ಚು ವರ್ಷಗಳ ಲಸಿಕೆ ಅನುಭವದೊಂದಿಗೆ, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ವೈದ್ಯಕೀಯ ತಜ್ಞರ ಜೊತೆಗೂಡಿ ಪ್ರತಿಯೊಬ್ಬರಿಗೂ ಈ ಲಸಿಕೆ ತಲುಪುವಂತೆ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.

ಆಗ್ನೇಯ ಏಷ್ಯಾ ಮತ್ತು ಇಂಡಿಯಾ ಕ್ಲಸ್ಟರ್‌ನ ಜನರಲ್ ಮ್ಯಾನೇಜರ್ ಪೀಟರ್ ಸ್ಟ್ರೈಬಲ್ ಮಾತನಾಡಿ, “ಡೆಂಗ್ಯೂ ಒಂದು ಪ್ರಾದೇಶಿಕ ಸಮಸ್ಯೆಯಾಗಿದ್ದು, ಗಡಿ ಮತ್ತು ವಲಯಗಳನ್ನು ಮೀರಿದ ಸಹಕಾರದ ಅಗತ್ಯವಿದೆ. ಟಕೆಡಾ ಸಂಸ್ಥೆಯು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ್ಯಂತ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ವೈದ್ಯಕೀಯ ತಜ್ಞರೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ಕೇವಲ ಕ್ಯುಡೆಂಗಾ ಲಸಿಕೆ ಸಿಗುವಂತೆ ಮಾಡುವುದು ಮಾತ್ರವಲ್ಲದೆ, ಕಾಯಿಲೆಯ ಮೇಲ್ವಿಚಾರಣೆ, ಜಾಗೃತಿ, ಸೊಳ್ಳೆ ನಿಯಂತ್ರಣ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಡೆಂಗ್ಯೂ ವಿರುದ್ಧ ಸಮಗ್ರ ಹೋರಾಟವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.

ಆಗ್ನೇಯ ಏಷ್ಯಾ ಮತ್ತು ಇಂಡಿಯಾ ಕ್ಲಸ್ಟರ್‌ನ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥ ಡಾ. ಗೋ ಚೂ ಬೆಂಗ್ ಮಾತನಾಡಿ, “ಭಾರತದಲ್ಲಿ ಡೆಂಗ್ಯೂ ಹರಡುವಿಕೆ ಹೆಚ್ಚಿದ್ದು, ಹಲವು ಪ್ರದೇಶಗಳಲ್ಲಿ ಡೆಂಗ್ಯೂ ವೈರಸ್‌ನ ನಾಲ್ಕೂ ತಳಿಗಳು ಒಂದೇ ಬಾರಿಗೆ ಸಕ್ರಿಯವಾಗಿರುವುದು ಕಂಡುಬಂದಿದೆ. ಕ್ಯುಡೆಂಗಾವನ್ನು ಈ ನಾಲ್ಕೂ ತಳಿಗಳ ವಿರುದ್ಧ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲಸಿಕೆಯ ಅನುಮೋದನೆಯು ಭಾರತದ ಡೆಂಗ್ಯೂ ತಡೆಗಟ್ಟುವಿಕೆಯ ಸಮಗ್ರ ವಿಧಾನಕ್ಕೆ ಸಿಕ್ಕ ದೊಡ್ಡ ಬಲವಾಗಿದೆ” ಎಂದು ತಿಳಿಸಿದರು.