ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ಆಗುತ್ತಿರುವ ತಾರತಮ್ಯ ಹಾಗೂ ಅವೈಜ್ಞಾನಿಕ ದರವಸೂಲಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ನವೆಂಬರ್ 11ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಕೆಂಜಾರುವಿನ ವಿಮಾನ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಈ ಧರಣಿ ನಡೆಯಲಿದ್ದು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಲು ಟ್ಯಾಕ್ಸಿ ಸಂಘಟನೆಗಳು ಸಿದ್ಧತೆ ನಡೆಸಿವೆ.

ಈ ಹಿಂದೆ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘಟನೆಗಳ ವತಿಯಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಉಡುಪಿ ಟ್ಯಾಕ್ಸಿ ಸಂಘದ ಅಧ್ಯಕ್ಷ ರಘುಪತಿ ಭಟ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಿದ್ದರು. ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ನಡುವೆ ವಿಮಾನ ನಿಲ್ದಾಣದ ಅಧಿಕಾರಿಗಳು ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಈ ಹಿಂದೆ ಮುಂದಿಟ್ಟಿದ್ದ ನಾಲ್ಕು ಪ್ರಮುಖ ಬೇಡಿಕೆಗಳ ಕುರಿತು ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಟ್ಯಾಕ್ಸಿ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಹೊಸದಾಗಿ ಜಾರಿಗೆ ತಂದಿರುವ 50 ರೂ. ಪ್ರವೇಶ ಶುಲ್ಕವನ್ನು ಕೈಬಿಡುವ ಕುರಿತು ನಾಲ್ಕು ದಿನಗಳೊಳಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಇದರಿಂದ ಮೂಲ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂಬುದು ಸಂಘಟನೆಗಳ ಅಭಿಪ್ರಾಯವಾಗಿದೆ.
ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘಟನೆಗಳ ನಿಯೋಗವು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದೆ.
ನವೆಂಬರ್ 11ರಿಂದ ಉಭಯ ಜಿಲ್ಲೆಗಳ ಸಮಾನ ಮನಸ್ಕ ಚಾಲಕ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಕಾನೂನುಬದ್ಧ ಅನುಮತಿ ಪಡೆಯಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಸಂಘದ ಅಧ್ಯಕ್ಷ ರಘುಪತಿ ಭಟ್, ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಸಂಘದ ಅಧ್ಯಕ್ಷ ಆನಂದ್ ಕೆ., ಪ್ರಧಾನ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ರೋಶನ್ ಕಿನ್ನಿಗೋಳಿ, ಸಮಿತಿ ಸದಸ್ಯರಾದ ಸಂತೋಷ್ ಕೊಲ್ಯ, ಪ್ರಕಾಶ್ ಸರಳಾಯ ಮತ್ತಿತರರು ಉಪಸ್ಥಿತರಿದ್ದರು.
ಟ್ಯಾಕ್ಸಿ ಚಾಲಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಯಲಿರುವ ಈ ಹೋರಾಟಕ್ಕೆ ಮಾಧ್ಯಮಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡುವಂತೆ ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಮನವಿ ಮಾಡಿದ್ದಾರೆ.

