ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಿಹಿ ಸುದ್ದಿ ನೀಡಿದ್ದು, ದೇಶಾದ್ಯಂತ ಖಾಲಿ ಇರುವ 545 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಕರ್ನಾಟಕಕ್ಕೆ 78 ಹುದ್ದೆಗಳು ಮೀಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲವರಾಗಿರಬೇಕು.
ಅರ್ಜಿದಾರರ ವಯಸ್ಸು 20 ರಿಂದ 30 ವರ್ಷಗಳೊಳಗೆ ಇರಬೇಕು. ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 9ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ ₹1,180, ಎಸ್‌ಸಿ, ಎಸ್‌ಟಿ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ₹59 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪ್ರಾವೀಣ್ಯತಾ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹48,480 ರಿಂದ ₹85,920ರವರೆಗೆ ವೇತನ ದೊರೆಯಲಿದೆ.
ಆನ್‌ಲೈನ್ ಲಿಖಿತ ಪರೀಕ್ಷೆಯು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಪರೀಕ್ಷೆಯಲ್ಲಿ 150 ಅಂಕಗಳಿಗೆ 150 ಬಹು ಆಯ್ಕೆ ಪ್ರಶ್ನೆಗಳು (MCQs) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನ (Negative Marking) ಅನ್ವಯವಾಗಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದೆ.

