ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸ್ಥಳೀಯ ನಿವಾಸಿಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ಡಿಜಿಟಲ್ ಸೇವೆಯನ್ನು ಪರಿಚಯಿಸಿದೆ. ಇನ್ನು ಮುಂದೆ ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರು ಟೋಲ್ ಕಚೇರಿಗೆ ತೆರಳುವ ಅಗತ್ಯವಿಲ್ಲದೆ, ‘ರಾಜಮಾರ್ಗಯಾತ್ರ’ (Rajmargyatra) ಮೊಬೈಲ್ ಆ್ಯಪ್ ಮೂಲಕವೇ ಡಿಜಿಟಲ್ ಲೋಕಲ್ ಪಾಸ್ ಪಡೆಯಬಹುದು.
ಈ ಹೊಸ ವ್ಯವಸ್ಥೆಯಲ್ಲಿ ಡಿಜಿಲಾಕರ್ ಹಾಗೂ VAHAN ಪೋರ್ಟಲ್‌ನೊಂದಿಗೆ ಆ್ಯಪ್ ಸಂಪರ್ಕ ಹೊಂದಿರುವುದರಿಂದ, ಅರ್ಜಿದಾರರ ವಿಳಾಸ ಮತ್ತು ಫಾಸ್ಟ್‌ಟ್ಯಾಗ್ ವಿವರಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಜಿಐಎಸ್ (GIS) ತಂತ್ರಜ್ಞಾನದ ಮೂಲಕ ನಿವಾಸವು ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿದೆಯೇ ಎಂಬುದನ್ನೂ ದೃಢಪಡಿಸಲಾಗುತ್ತದೆ.
ಈ ಡಿಜಿಟಲ್ ಲೋಕಲ್ ಪಾಸ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ದೆಹಲಿಯ ಮುಂಡ್ಕಾ–ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸುವ ಯೋಜನೆ ಇದೆ.
ಇದರ ಜೊತೆಗೆ, ‘ಮಾರ್ಗ್‌ಮಿತ್ರ’ ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಹಾಯಕ ಸೇವೆಯನ್ನೂ NHAI ಪರಿಚಯಿಸಿದೆ. ಕನ್ನಡ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಪ್ರಯಾಣಿಕರು ತಮ್ಮ ಪ್ರಶ್ನೆಗಳು ಹಾಗೂ ದೂರುಗಳನ್ನು ಧ್ವನಿ ಅಥವಾ ಪಠ್ಯದ ಮೂಲಕ ಸಲ್ಲಿಸಬಹುದು.
ಫಾಸ್ಟ್‌ಟ್ಯಾಗ್ ರೀಚಾರ್ಜ್, ಕೆವೈಸಿ ಮಾಹಿತಿ, ಹಣ ಮರುಪಾವತಿ, ಹೆದ್ದಾರಿಯಲ್ಲಿ ವಾಹನ ಕೆಟ್ಟುನಿಂತಾಗ ತುರ್ತು ನೆರವು, ರಸ್ತೆ ಸಮಸ್ಯೆಗಳ ಕುರಿತು ದೂರು ದಾಖಲಿಸುವುದು ಸೇರಿದಂತೆ ಹಲವು ಸೇವೆಗಳು ಈ ಆ್ಯಪ್‌ನಲ್ಲಿ ಲಭ್ಯವಿವೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ 1033 ಸಹಾಯವಾಣಿಗೆ ನೇರ ಸಂಪರ್ಕ ಸಾಧಿಸಿ ಆಂಬ್ಯುಲೆನ್ಸ್ ಅಥವಾ ಕ್ರೇನ್ ಸೇವೆಯನ್ನೂ ಪಡೆಯಬಹುದು.
ಇದಲ್ಲದೆ, ಹೆದ್ದಾರಿ ಮಾರ್ಗದಲ್ಲಿರುವ ಪೆಟ್ರೋಲ್ ಬಂಕ್‌ಗಳು, ಶೌಚಾಲಯಗಳು, ಹೋಟೆಲ್‌ಗಳು, ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳ ಮಾಹಿತಿಯೂ ಆ್ಯಪ್‌ನಲ್ಲಿ ದೊರೆಯಲಿದೆ. ಈಗಾಗಲೇ 80 ಲಕ್ಷಕ್ಕೂ ಹೆಚ್ಚು ಹೆದ್ದಾರಿ ವಾರ್ಷಿಕ ಪಾಸ್‌ಗಳು ಈ ಆ್ಯಪ್ ಮೂಲಕ ವಿತರಿಸಲಾಗಿದ್ದು, ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರು ರಾಜಮಾರ್ಗಯಾತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ಸೇವೆಗಳ ಪ್ರಯೋಜನ ಪಡೆಯಬಹುದು.

