ಹಾವು–ನಾವು ಕಾರ್ಯಕ್ರಮ

0
18

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ “ಹಾವು–ನಾವು” ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉರಗ ತಜ್ಞ ಡಾ. ಗುರುರಾಜ್ ಸನಿಲ್ ಅವರು ಹಾವುಗಳ ಜೀವನಶೈಲಿ, ಅವುಗಳ ಮಹತ್ವ ಹಾಗೂ ಹಾವುಗಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಾತನಾಡಿದ ಅವರು, “ಹಾವುಗಳು ಮನೆಗಳಿಗೆ ಬರುವುದು ಆಹಾರವನ್ನು ಹುಡುಕಿಕೊಂಡು ಹೊರತು ಮನುಷ್ಯರ ಮೇಲೆ ದಾಳಿ ಮಾಡಲು ಅಲ್ಲ” ಎಂದು ತಿಳಿಸಿದರು. ಅಲ್ಲದೆ, ಒಂದು ಹಾವನ್ನು ಕೊಂದರೆ ಆ ಪ್ರದೇಶಕ್ಕೆ ಅದೇ ಜಾತಿಯ ಇನ್ನಿತರ ಹಾವುಗಳು ಬರುವ ಸಾಧ್ಯತೆ ಇರುತ್ತದೆ ಎಂಬ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.

ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ವಿವಿಧ ಜಾತಿಯ ಹಾವುಗಳು, ಅವುಗಳ ಸ್ವಭಾವ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವುಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು. ಬಳಿಕ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಡಾ. ಗುರುರಾಜ್ ಸನಿಲ್ ಅವರು ವಿವರವಾದ ಉತ್ತರಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಅವರು ಸಂಪನ್ಮೂಲ ವ್ಯಕ್ತಿಯನ್ನು ಸ್ಮರಣಿಕೆ ನೀಡಿ ಗೌರವಿಸಿದರು.

ವಿದ್ಯಾರ್ಥಿನಿ ಅವನಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ತಸ್ವಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರೆ, ರಚಿತಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.