ಮಗುವನ್ನು ಜೀವಂತ ಸಮಾಧಿ ಮಾಡಿದ್ದ ಪ್ರಕರಣ; ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ

0
60

ನವದೆಹಲಿ : ಇಡೀ ಕುಟುಂಬದ ಮುದ್ದಿನ ಕಂದಮ್ಮನಾಗಿದ್ದ ಕೇವಲ ಎರಡೂವರೆ ವರ್ಷದ ದಿಲ್ ರೋಜ್ ಹತ್ಯೆ ಪ್ರಕರಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಆರೋಪಿ ನೀಲಂ ಇದೀಗ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ, ಕುಟುಂಬದೊಂದಿಗೆ ನೆರೆಹೊರೆಯಾಗಿ ವಾಸಿಸುತ್ತಿದ್ದ ವಿಚ್ಛೇದಿತ ಮಹಿಳೆ ನೀಲಂ, ವೈಯಕ್ತಿಕ ದ್ವೇಷ ಮತ್ತು ಅಸೂಯೆಯ ಹಿನ್ನೆಲೆಯಲ್ಲಿ ಮಗುವನ್ನು ಗುರಿಯಾಗಿಸಿಕೊಂಡಿದ್ದಳು ಎನ್ನಲಾಗಿದೆ. ಒಂದು ದಿನ ಮಗುವನ್ನು ಸ್ಕೂಟರ್‌ನಲ್ಲಿ ಸುತ್ತಾಡಿಸಿ ಕರೆತರುತ್ತೇನೆ ಎಂದು ನಂಬಿಸಿ ಮನೆಯಿಂದ ಕರೆದೊಯ್ದಿದ್ದಳು.

ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವಿನ ಮೇಲೆ ಅಮಾನುಷ ಹಲ್ಲೆ ನಡೆಸಿದ್ದಾಳೆ. ಮಗು ಕಿರುಚದಂತೆ ಅದರ ಬಾಯಿಗೆ ಮಣ್ಣು ತುರುಕಿ, ಜೀವಂತವಾಗಿದ್ದಾಗಲೇ ಸಣ್ಣ ಗುಂಡಿಯಲ್ಲಿ ಹೂತು ಹಾಕಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಮಗು ಕಾಣೆಯಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ನೀಲಂ ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಕೃತ್ಯವನ್ನು ‘ವಿರಳಾತಿ ವಿರಳ’ (Rarest of Rare) ಪ್ರಕರಣ ಎಂದು ಪರಿಗಣಿಸಿ ಆರೋಪಿಗೆ ಮರಣದಂಡನೆ ವಿಧಿಸಿತ್ತು.

ಈಗ ಆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ನೀಲಂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದರಿಂದ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.