ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಕ್ಕೆ ಆಗ್ರಹಿಸಿ ಸೆ.15ರಂದು ಎಕ್ಸ್ ಅಭಿಯಾನ

0
9

ಮಂಗಳೂರು : ತುಳು ಭಾಷೆಗೆ ಕರ್ನಾಟಕ ಹಾಗೂ ಕೇರಳದಲ್ಲಿ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 15ರಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

TuluOfficialinKA_KL ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ನಡೆಯಲಿರುವ ಈ ಅಭಿಯಾನವು ಸೆಪ್ಟೆಂಬರ್ 15ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ನಡೆಯಲಿದೆ. ತುಳು ಭಾಷೆಯ ಅಧಿಕೃತ ಬಳಕೆಗೆ ಮಾನ್ಯತೆ ದೊರೆಯಬೇಕು ಎಂಬ ಆಶಯದೊಂದಿಗೆ ತುಳುನಾಡಿನ ಜನರು, ತುಳುಪರ ಸಂಘಟನೆಗಳು, ಭಾಷಾಭಿಮಾನಿಗಳು ಹಾಗೂ ವಿಶ್ವದಾದ್ಯಂತ ನೆಲೆಸಿರುವ ತುಳುವರು ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.

ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆಡಳಿತಾತ್ಮಕ ಮಾನ್ಯತೆ ಮಹತ್ವದ ಹೆಜ್ಜೆಯಾಗಲಿದೆ. ಸರ್ಕಾರಿ ಕಚೇರಿಗಳು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತುಳು ಭಾಷೆಯ ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂಬುದು ಅಭಿಯಾನದ ಪ್ರಮುಖ ಆಶಯವಾಗಿದೆ.

ಸೆ.15ರಂದು ನಿಗದಿತ ಸಮಯದಲ್ಲಿ #TuluOfficialinKA_KL ಹ್ಯಾಶ್‌ಟ್ಯಾಗ್ ಬಳಸಿ ಎಕ್ಸ್‌ನಲ್ಲಿ ಪೋಸ್ಟ್, ರಿಪೋಸ್ಟ್ ಹಾಗೂ ಅಭಿಯಾನಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

“ತುಳುವಿನ ಧ್ವನಿಗೆ ನಮ್ಮ ಧ್ವನಿ ಸೇರಿಸೋಣ – ತುಳುವಿಗೆ ಅಧಿಕೃತ ಆಡಳಿತ ಭಾಷೆಯ ಮಾನ್ಯತೆಗಾಗಿ ಒಂದಾಗೋಣ” ಎಂಬ ಸಂದೇಶದೊಂದಿಗೆ ಅಭಿಯಾನ ನಡೆಯಲಿದೆ.

ಅಭಿಯಾನದ ಸಮಯ: ಸೆಪ್ಟೆಂಬರ್ 15, ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ
ಹ್ಯಾಶ್‌ಟ್ಯಾಗ್: #TuluOfficialinKA_KL

ತುಳುನಾಡಿನ ಧ್ವನಿಯಾಗೋಣ – ಅಭಿಯಾನದಲ್ಲಿ ಕೈಜೋಡಿಸೋಣ.