ಕಾಸರಗೋಡು : ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಅಂಗವಾಗಿ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ-2026 ಜುಲೈ 26ರಂದು ಕನ್ನಡ ಭವನ, ಪಿ.ಎಂ.ಎಸ್. ರಸ್ತೆ, ನುಳ್ಳಿಪ್ಪಾಡಿಯಲ್ಲಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇವಾಕಾಂಕ್ಷಿಯಾಗಿರುವ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಕಾಸರಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಿಂದ ಕನ್ನಡ ಭವನದವರೆಗೆ ಅದ್ಧೂರಿ ಕನ್ನಡ ಮೆರವಣಿಗೆ ನಡೆಯಲಿದ್ದು, ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ರೂವಾರಿ ಬಿ. ಶಿವಕುಮಾರ್ ಕನ್ನಡ ಧ್ವಜಾರೋಹಣದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಎಸ್. ಬಾಲಾಜಿ ಕಲಾ ಮೇಳವನ್ನು ಉದ್ಘಾಟಿಸಲಿದ್ದು, ಬೆಂಗಳೂರು, ಕೋಲಾರ, ಮಂಡ್ಯ, ಕನಕಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾ ತಂಡಗಳು ಸಮೂಹ ನೃತ್ಯ, ಜಾನಪದ ನೃತ್ಯ, ಯಕ್ಷಗಾನ, ಕಥಕ್ಕಳಿ, ಡೊಳ್ಳು ಕುಣಿತ, ತಮಟೆ, ಪೂಜಾ ಕುಣಿತ, ಪಟ ಕುಣಿತ, ನಾಸಿಕ್ ಬ್ಯಾಂಡ್, ಕೇರಳ ಚೆಂಡೆ ಮೇಳ, ಭಜನೆ ಹಾಗೂ ಕುಣಿತ ಭಜನೆ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿವೆ.
ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಗಡಿನಾಡಿನ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

